ಯುಪಿಐ ಪೇಮೆಂಟ್‌ಗಿಲ್ಲ, ವಹಿವಾಟಿಗಷ್ಟೇ ಜಿಎಸ್‌ಟಿ

Vijayavani's top news of the day 01/02/2025
Published on

ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿ ಮಾಡುವ ಯಾವ ಪ್ರಕ್ರಿಯೆಗೂ ಜಿಎಸ್‌ಟಿ ವಿಧಿಸುವುದಿಲ್ಲ. ಬದಲಾಗಿ ವಹಿವಾಟು ನಡೆಸುವುದಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ಈ ವಿಚಾರದಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಅನಗತ್ಯ ಗೊಂದಲ ಮಾಡಿಕೊಳ್ಳದೆ ಪಾರದರ್ಶಕವಾಗಿ ವಹಿವಾಟು ಕೈಗೊಳ್ಳಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಪದ್ಮಾಕರ ಆರ್. ಕುಲಕರ್ಣಿ ತಿಳಿಸಿದ್ದಾರೆ.

ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕರೆ ಮಾಡಿದ್ದ ಸಾರ್ವಜನಿಕರ ಪ್ರಶ್ನೆಗಳು ಹಾಗೂ ಜಿಎಸ್‌ಟಿ ಸಂಬಂಧಿತ ಸಂದೇಹಗಳಿಗೆ ಪರಿಹಾರ ರೂಪದ ಉತ್ತರಗಳನ್ನು ನೀಡಿ ಅವರು ಮಾತನಾಡಿದರು.

ನಾಗರಿಕರು ಅಥವಾ ವ್ಯಾಪಾರಿಗಳು ಯಾರೇ ಆಗಿದ್ದರೂ, ಯುಪಿಐ ಮೂಲಕ ಹಣ ಪಾವತಿಸಲು ಸರ್ವಸ್ವತಂತ್ರರಿದ್ದಾರೆ. ಈ ರೀತಿಯ ಪಾವತಿಗೆ ಯಾವುದೇ ವಿಧದಲ್ಲೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ. ಪಾವತಿ ಹಾಗೂ ವಹಿವಾಟು ಪ್ರಕ್ರಿಯೆ ಬೇರೆ ಬೇರೆಯಾಗಿದ್ದು, ಕೆಲ ಸಂದರ್ಭಗಳಲ್ಲಿ ಅನಗತ್ಯ ಗೊಂದಲ ಏರ್ಪಡುವುದು ಸಹಜ. ಇತ್ತೀಚಿನ ಘಟನಾವಳಿ ಬಳಿಕ ಸಾರ್ವಜನಿಕ ವಲಯದಲ್ಲಿ ಕೆಲವೊಂದು ತಪ್ಪು ಕಲ್ಪನೆ ಮೂಡಿದೆ. ಎಲ್ಲರೂ ದೈನಂದಿನ ಕಾರ್ಯದಲ್ಲಿ ಹಣ ಪಾವತಿ ಮಾಡಬೇಕಿರುವುದರಿಂದ ಇದು ಪೇಮೆಂಟ್ ರೂಪದಲ್ಲಿರುತ್ತದೆ. ಹಾಗಾಗಿ ಯಾವುದೇ ಪೇಮೆಂಟ್‌ಗೆ ತೆರಿಗೆ ವಿಧಿಸುವ ಅಂಶ ಕಾನೂನಿನಲ್ಲಿ ಇಲ್ಲ. ಬದಲಾಗಿ ಒಂದು ಸರಕನ್ನು ವಹಿವಾಟು ಮೂಲಕ ಮಾರಾಟ ಮಾಡುವುದು ಅಥವಾ ಸೇವೆ ನೀಡುವಂತಿದ್ದಲ್ಲಿ ಆಗ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ. ಈ ಸೂಕ್ಷ್ಮತೆಯನ್ನು ಅರಿತುಕೊಂಡಲ್ಲಿ ಜಿಎಸ್‌ಟಿ ಬಗೆಗಿನ ಗೊಂದಲ, ಸಂದೇಹಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.

ಇಲಾಖೆಯಿಂದ ನಿರಂತರ ಜಾಗೃತಿ:

ಜಿಎಸ್‌ಟಿ ವಿಚಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ನಿರಂತರವಾಗಿ ಜನಜಾಗೃತಿಯಲ್ಲಿ ತೊಡಗಿಸಿಕೊಂಡಿದೆ. ವ್ಯಾಪಾರಿಗಳು ಒಳಗೊಂಡಂತೆ ಸಾರ್ವಜನಿಕರಿಗೆ ಆಗಾಗ್ಗೆ ಉದ್ಭವಿಸುವ ಪ್ರಶ್ನೆಗಳು, ಇನ್‌ವಾಯ್ಸ ಬಗೆಗಿನ ಸ್ಪಷ್ಟತೆ ಸೇರಿ ಇನ್ನಿತರ ವಿಷಯಗಲಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿರುವ ಇಲಾಖಾ ಕಚೇರಿಗೆ ಭೇಟಿ ನೀಡುವವರಿಗೂ ತೆರಿಗೆ ಪದ್ಧತಿ ಸೇರಿ ಅವರಿಗೆ ಎದುರಾಗ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ಆನ್‌ಲೈನ್ ಮೂಲಕ ಜಿಎಸ್‌ಟಿ ನೋಂದಣಿ, ಶುಲ್ಕ ವಿವರ, ಇನ್ನಿತರ ಮಾಹಿತಿ ಪಡೆಯಲು ಸಮಸ್ಯೆ ಉಂಟಾದಲ್ಲಿ ಅಂಥವರಿಗೆ ಕಚೇರಿಯಲ್ಲೇ ತಿಳಿವಳಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಆಗಾಗ್ಗೆ ಜಾಗೃತಿ ಜಾಥ, ಪ್ರದರ್ಶನ, ಕರಪತ್ರದ ಮೂಲಕವೂ ಅರಿವು ಮೂಡಿಸುವಲ್ಲಿ ಇಲಾಖೆ ನಿರತವಾಗಿದೆ.

ಯುಪಿಐ ವಹಿವಾಟಿಗೆ ಹೆದರಬೇಕಿಲ್ಲ:

ಯುಪಿಐ ಮೂಲಕ ಹೆಚ್ಚಿನ ಮೊತ್ತದ ವಹಿವಾಟು ನಡೆಸಲು ಯಾವುದೇ ನಿರ್ಬಂಧ ಇಲ್ಲ. ಆದರೆ, ಸ್ವಂತದ ವೆಚ್ಚಗಳಿಗೆ ಪಾವತಿ ಮಾಡಿದ್ದರೆ ತೆರಿಗೆ ಅಡಿ ಬರುವುದಿಲ್ಲ. ವಹಿವಾಟಿಗೆ ಸಂಬಂಧ ಇದಲ್ಲಿ ಮಾತ್ರ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುತ್ತದೆ. ಆದರೂ, ವಹಿವಾಟಿಗೆ ಸಂಬಂಧಿಸಿ ದಾಖಲಾತಿ ಒದಗಿಸಿದರೆ ಯಾವುದೇ ತೊಂದರೆ ಎದುರಾಗದು. ವಹಿವಾಟಿನ ಮೂಲ ಎಲ್ಲಿಂದ ಆಗಿದೆ ಎಂಬುದನ್ನು ಅರಿಯಲಷ್ಟೇ ಇಲಾಖೆ ಮಾಹಿತಿ ಕಲೆ ಹಾಕುತ್ತದೆ. ಒಂದು ವೇಳೆ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಸೇಲ್ಸ್‌ಮನ್‌ನ ಸ್ವಂತ ಮೊಬೈಲ್‌ಗೆ ಹಣ ಜಮೆಯಾಗುತ್ತಿದ್ದರೆ, ಆ ಕುರಿತು ದಾಖಲೆ ಒದಗಿಸಿ ಪರಿಹಾರ ಕಂಡುಕೊಳ್ಳಬಹುದು. ಅಂಗಡಿ ಮಾಲೀಕನು ತಾನು ಈ ಮುನ್ನ ಖರೀದಿಸಿದ ಅಥವಾ ಮಾರಾಟ ಮಾಡಿದ ಪ್ರಕ್ರಿಯೆ ಸಂಬಂಧ ದಾಖಲಾತಿಯನ್ನು ಇಲಾಖೆ ಗಮನಕ್ಕೆ ತಂದಲ್ಲಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ರೈತರಿಗೆ ಜಿಎಸ್‌ಟಿ ಅನ್ವಯಿಸದು:

ರೈತರು ಬೆಳೆಯುವ ಯಾವುದೇ ಬೆಳೆ ಅಥವಾ ಮಾರಾಟ ಮಾಡುವ ಪ್ರಕ್ರಿಯೆಗೆ ಜಿಎಸ್‌ಟಿ ಅನ್ವಯವಾಗದು. ಕೃಷಿಕ ಮೊದಲ ಉತ್ಪಾದಕ ಆಗಿರುವುದರಿಂದ ಇಲಾಖೆಯ ನಿಯಮಗಳು ಅನ್ವಯಿಸದು. ರೈತನ ಹೆಸರಿನಲ್ಲಿ ಅನ್ಯ ವ್ಯಕ್ತಿಗಳು ಮಾರಾಟ ಪ್ರಕ್ರಿಯೆ ನಡೆಸಿದ್ದಲ್ಲಿ ಆಗ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುತ್ತದೆ.

ಕರೆಗಳ ಮಹಾಪೂರ . . .

ಫೋನ್ ಇನ್ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಅಸಂಖ್ಯ ದೂರವಾಣಿ ಕರೆಗಳು ಬಂದವು. ಶಿವಮೊಗ್ಗ, ಕೊಪ್ಪಳ, ರಾಯಚೂರು, ಬೆಳಗಾವಿ, ಬೀದರ್, ರಾಮನಗರ, ಸೊರಬ ಸೇರಿ ಹಲವು ನಗರ ಹಾಗೂ ಪಟ್ಟಣಗಳಿಂದ ಓದುಗರು ಕರೆ ಮಾಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಸಾರ್ವಜನಿಕರು ಕೇಳಿದ ಹಲವು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿದ ಪದ್ಮಾಕರ ಆರ್. ಕುಲಕರ್ಣಿ, ಪಾರದರ್ಶಕವಾಗಿ ವ್ಯಾಪಾರ ನಡೆಸಿದರೆ ಯಾವುದೇ ಸಮಸ್ಯೆ ಉದ್ಭವಿಸದು ಎಂದು ಸಲಹೆ ನೀಡಿ ಸಮಾಧಾನದ ಮಾತುಗಳನ್ನಾಡಿದರು. ಕೆಲ ವ್ಯಾಪಾರಿಗಳು ತಮಗೆ ಜಿಎಸ್‌ಟಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ತಡವಾಗಿ ನೋಂದಣಿ ಮಾಡಿದರೆ ದಂಡ ವಿಧಿಸಲಾಗುತ್ತದೆಯೆ ಎಂಬಿತ್ಯಾದಿ ಸಂದೇಶಗಳಿಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮ ಮುಗಿದ ನಂತರವೂ ಕರೆಗಳು ಬರುತ್ತಿದ್ದವು.

1 ಕ್ಕಿಂತ ಹೆಚ್ಚು ಪಾನ್ ಹೊಂದುವಂತಿಲ್ಲ:

ಯಾವೊಬ್ಬ ವ್ಯಕ್ತಿ ಅಥವಾ ವ್ಯಾಪಾರಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಪಾನ್ ಕಾರ್ಡ್ ಹೊಂದುವಂತಿಲ್ಲ. ಆದರೂ, ಒಂದಕ್ಕಿಂತ ಹೆಚ್ಚು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವವರು ಒಂದೇ ಪಾನ್ ಕಾರ್ಡ್ ಬಳಸಿ ವಿವಿಧ ವಹಿವಾಟಿಗೆ ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಲು ಅವಕಾಶ ಇದೆ. ನಿಯಮ ಪ್ರಕಾರ 1ಕ್ಕಿಂತ ಅಧಿಕ ಪಾನ್ ಕಾರ್ಡ್ ಹೊಂದುವುದು ಅಪರಾಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net