

ರಾಯಚೂರು ಎಸ್ಸಿ ಪಟ್ಟಿಗೆ ಬೇಡ ಜಂಗಮರ ಸೇರ್ಪಡೆ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದು ಅಸಂಬದ್ಧವಾಗಿದೆ, ಬೇಡಜಂಗಮರು ನ್ಯಾಯಯುತ ಹಕ್ಕು ಪಡೆಯಲು ಸಾಧ್ಯವಿದೆ. ಇದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲವೆಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜ ಸಂಸ್ಥೆಯ ರಾಜ್ಯ ಗೌರವಾಧ್ಯಕ್ಷ ಕಲ್ಯಾಣ ಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತಿಚ್ಚಿಗೆ ವಿಜಯನಗರದಲ್ಲಿ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗವಾಗಿ ಮಾತನಾಡಿದ್ದು ಸರಿಯಲ್ಲ, ಬೇಡ ಜಂಗಮರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ, ಬೇಡ ಜಂಗಮರು ನ್ಯಾಯಯುತ ಹಕ್ಕು ಪಡೆಯಲು ಸಾಧ್ಯವಿದೆ. ಇದೀಗ ಜಾತಿ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆಯಲ್ಲಿ ಬೇಡ ಜಂಗಮರು ಜಾತಿ ಕಲಂನಲ್ಲಿ ಎಸ್ಸಿ ಎಂದು ಬರೆಯಿಸಲು ಹಿಂಜರಿಯಬಾರದು.
ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಸದುದ್ದೇಶದಿಂದ ಸಮೀಕ್ಷೆ ನಡೆಸಲಾಗುತ್ತಿದೆ. 9(1) ಕಾಲಂನಲ್ಲಿ ಬೇಡಜಂಗಮ ಜಾತಿಯ ಉಲ್ಲೇಖವಿದೆ. ಕಾನೂನಾತ್ಮಕವಾಗಿಯೇ ಬೇಡಜಂಗಮ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು ಎಸ್ಸಿ ಪಟ್ಟಿಯಲ್ಲಿರುವ ಬೇಡ ಜಂಗಮ ವಿದ್ಯಾರ್ಥಿಗೆ ವಿದೇಶ ಪ್ರವಾಸಕ್ಕೆ 40 ಲಕ್ಷ ರೂ ಅನುದಾನ ನೀಡಿದ್ದಾರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಾಖಲೆಗಳಿವೆ ಪರಿಶೀಲನೆ ಮಾಡಲಿ. ಖರ್ಗೆ ಅವರು ನ್ಯಾಯಾಂಗ ನಿಂದನೆ ಮಾಡುವಂತಹ ಬಹಿರಂಗ ಹೇಳಿಕೆ ನೀಡಿರುವುದು ಸಂವಿಧಾನಿಕ ಹಾಗೂ ನ್ಯಾಯಾಂಗ ಬಗೆದ ಅನ್ಯಾಯವಾಗಿದೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಎಂದರು.
ಬೇಡ ಜಂಗಮರು ರಾಜಕಾರಣಿಗಳ ಹೇಳಿಕೆಗಳಿಂದ ಯಾರೂ ಹತಾಶೆರಾಗದೆ ಜಾತಿ ಸಮೀಕ್ಷೆ ವೇಳೆ ಜಾತಿ ಕಲಂನಲ್ಲಿ ಎಸ್ಸಿ ಎಂದು ಬರೆಯಿಸಬೇಕು ಎಂದರು.
ಈ ಸಂದರ್ಭದಲ್ಲಿ ವೀರಯ್ಯಸ್ವಾಮಿ ಆಶಾಪೂರ, ಬಸಲಿಂಗಯ್ಯಸ್ವಾಮಿ, ಶಿವಯ್ಯಸ್ವಾಮಿ, ಸುಲೋಚನಾ, ಪ್ರಭು ಶಾಸ್ತ್ರಿ ಇದ್ದರು.\