ಯಾವ ತಂತ್ರಜ್ಞಾನವೂ ಪ್ರಾಧ್ಯಾಪಕರ ಸ್ಥಾನ ತುಂಬಲಾರದು : ಕುಲಪತಿ ಡಾ.ಎಸ್. ಅಹಲ್ಯಾ ಅಭಿಮತ

10
Published on

ಮೈಸೂರು: ಕೃತಕ ಬುದ್ಧಿಮತ್ತೆ (ಎ.ಐ.) ಸೇರಿದಂತೆ ಯಾವುದೇ ಆಧುನಿಕ ತಂತ್ರಜ್ಞಾನ ಬಂದರೂ ಅವುಗಳು ಪ್ರಾಧ್ಯಾಪಕರ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್. ಅಹಲ್ಯಾ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಹಮ್ಮಿಕೊಂಡಿದ್ದ 53 ದಿನಗಳ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳೆದಂತೆ ಎಲ್ಲ ಕ್ಷೇತ್ರವನ್ನೂ ಆವರಿಸಿಕೊಳ್ಳುತ್ತಿದೆ. ಬೇಕಾದ ಮಾಹಿತಿ ಕ್ಷಣಮಾತ್ರದಲ್ಲಿ ನಮ್ಮ ಕೈ ಬೆರಳಿನಲ್ಲೇ ದೊರೆಯುತ್ತದೆ. ಆದರೆ ಅವುಗಳನ್ನು ವಿಶ್ಲೇಷಿಸಿ, ಅರ್ಥೈಸುವಲ್ಲಿ ಗುರು ಬೇಕೇ ಬೇಕು. ಹಾಗಾಗಿ ಕೃತಕ

ಬುದ್ಧಿಮತ್ತೆ (ಎ.ಐ.) ಅಥವಾ ಇನ್ಯಾವುದೇ ತಂತ್ರಜ್ಞಾನ ಬಂದರೂ ಅವು ಗುರುವಿನ (ಪ್ರಾಧ್ಯಾಪಕರ) ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಹೇಳಿದರು.

ಶಿಕ್ಷಕ ವೃತ್ತಿ ಮಹತ್ವಪೂರ್ಣವಾದದ್ದು. ಶಿಕ್ಷಕರಾಗುವವರು ಮುಂದೆ ಬಹುದೊಡ್ಡ ಶಿಷ್ಯವರ್ಗವನ್ನೇ ನಿರ್ಮಿಸಬಹುದು. ಹಾಗಾಗಿ ಶಿಕ್ಷಕರನ್ನು ದೇಶದ ಭವಿಷ್ಯದ ರೂವಾರಿಗಳು ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ಬೋಧನಾ ವೃತ್ತಿಯ ಜವಾಬ್ದಾರಿ ಬಹಳ ದೊಡ್ಡದು ಎಂದರು.

ಮಹಿಳೆಯರೇ ಅಧಿಕ: ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿ, ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ತಯಾರಿ ಜತೆಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಕಡೆಗೂ ಗಮನಹರಿಸಿ. ನಾಗರಿಕ ಸೇವೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧರಾಗಿ ಎಂದು ಸಲಹೆ ನೀಡಿದರು.

ತರಬೇತಿ ಶಿಬಿರದಲ್ಲಿ ಬಹುತೇಕ ಮಹಿಳೆಯರೇ ಇರುವುದು ಪ್ರಗತಿಯ ಸೂಚಕ. ಮನೆ ಹಾಗೂ ಸಮಾಜಕ್ಕೆ ಮಾತೆಯರು ಮಾರ್ಗದರ್ಶಕರಾಗಲಿ. ವರ್ಷ ಪೂರ್ತಿ ಓದಿದ್ದನ್ನು ಮೂರು ಗಂಟೆಯಲ್ಲಿ ನಿರೂಪಿಸಬೇಕು. ಪರೀಕ್ಷಾ ವೇಳೆಯ ಆ ಮೂರು ಗಂಟೆ ಸಮಯವೇ ನಿಮ್ಮ ಬದುಕು ರೂಪಿಸಲಿದೆ. ಹೀಗಾಗಿ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರೆ ಸಾಧನೆ ಹುಡುಕಿಕೊಂಡು ಬರುತ್ತದೆ ಎಂದರು.

ಬರವಣಿಯೇ ಮುಖ್ಯ:ಎಲ್ಲ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಬರವಣಿಗೆ ಬಹಳ ಮುಖ್ಯ. ಹೀಗಾಗಿ ಬರೆಯುವುದನ್ನೇ ಚೆನ್ನಾಗಿ ರೂಢಿಸಿಕೊಳ್ಳಿ. ಓದುವಾಗ ಮುಖ್ಯ ವಿಷಯದ ಕಿರುಟಿಪ್ಪಣಿ (ಕೀ ನೋಟ್ಸ್) ಮಾಡುವ ಮೂಲಕ ಬರವಣಿಗೆಯ ಶೈಲಿ ಕರಗತ ಮಾಡಿಕೊಳ್ಳಿ ಎಂದು ಮನೋಜ್ ಜೈನ್ ಸಲಹೆ ನೀಡಿದರು.

ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಕೊರತೆ ಇದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಪರೀಕ್ಷಾ ಅಭ್ಯರ್ಥಿಗಳು ಸಜ್ಜುಗೊಳ್ಳಬೇಕು. ಗುಣಮಟ್ಟದ ಶಿಕ್ಷಣದಿಂದ ದೇಶಕ್ಕೆ ಉನ್ನತವಾದ ಸಂಶೋಧಕರು ಲಭ್ಯವಾಗಲಿದ್ದಾರೆ ಎಂದರು. ವಿದ್ಯಾರ್ಥಿಗಳ ಗುರಿ ಸ್ಪಷ್ಟವಾಗಿರಬೇಕು. ಆಗಾಗ್ಗೆ ಆತ್ಮಾವಲೋಕನ ಮಾಡಿಕೊಂಡು ದೇಶಕ್ಕೆ ಏನಾದರೂ ವಿಶೇಷ ಕೊಡುಗೆ ನೀಡುವ ದಿಸೆಯಲ್ಲಿ ಸಾಧನೆ ತೋರಬೇಕು ಎಂದರು.

ಭವಿಷ್ಯ ಉಜ್ವಲವಾಗಿರಲಿ: ಮುಕ್ತ ವಿವಿ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿವಿ ನ್ಯಾಕ್‌ನಿಂದ ಎ+ ಮಾನ್ಯತೆ ಪಡೆದಿದೆ. ಇದಕ್ಕೆ ಕುಲಪತಿ ಸೇರಿದಂತೆ ಎಲ್ಲರ ಶ್ರಮ ದೊಡ್ಡದು. ಇಂತಹ ವಿವಿಯ ಪರಿಸರದಲ್ಲಿ ತರಬೇತಿ ಪಡೆದವರ ಭವಿಷ್ಯ ಉಜ್ವಲವಾಗಿರಲಿ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ವಿಶ್ವನಾಥ್, ಡೀನ್ ಪ್ರೊ. ರಮಾನಾಥಂ ನಾಯ್ಡು, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರಾಧ್ಯಾಪಕರಾದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಡಾ. ಶೈಲೇಶ್ ರಾಜೇ ಅರಸ್, ಡಾ. ಜ್ಯೋತಿಶಂಕರ್, ವಿಶೇಷಾಧಿಕಾರಿ ಮಹದೇವ, ಹಿರಿಯ ಪ್ರಾಧ್ಯಾಪಕ ಎನ್.ಎನ್ ಪ್ರಹ್ಲಾದ , ಸಿಬ್ಬಂದಿ ಗಣೇಶ್, ಸಿದ್ದೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net