

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ 21 ಕೋಟಿ ರೂಪಾಯಿ ಅನುದಾನದಲ್ಲಿ ನಗರದ ನೆಹರು ಮೈದಾನ ನವೀಕರಣ ಕಾಮಗಾರಿ ಕೈಗೆತ್ತಿಕೊಂಡರೂ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಕೈ ಬಿಟ್ಟಿರುವುದಕ್ಕೆ ಜಿಲ್ಲೆಯ ಅಥ್ಲಿಟ್ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ಹಣ ವ್ಯಯಿಸಿದ ಮೇಲೂ ಇಲ್ಲಿ ಕ್ರೀಡೇತರ ಚಟುವಟಿಕೆಗಳಿಗೆ ಅವಕಾಶ ನೀಡುವುದಾದರೆ ಮಾಡಿದೆಲ್ಲ ನಿರರ್ಥಕ ಎಂದು ಟೀಕಿಸಿದ್ದಾರೆ.
ಮೈದಾನದಲ್ಲಿ ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ಬಾಲ್, ಮ್ಯಾಟ್ ಕಬಡ್ಡಿ, ಮ್ಯಾಟ್ ಕುಸ್ತಿ, ಇತ್ಯಾದಿ ಕ್ರೀಡಾ ಸೌಲಭ್ಯಗಳು ಬರಲಿವೆ. ಅಥ್ಲೆಟಿಕ್ಸ್ ಟ್ರ್ಯಾಕ್ ಸಹ ಇರಲಿದೆ. ಆದರೆ, ಸಿಂಥೆಟಿಕ್ ಟ್ರ್ಯಾಕ್ ಇರುವುದಿಲ್ಲ. ಇದು ಅಥ್ಲಿಟ್ಗಳ ಬೇಸರಕ್ಕೆ ಕಾರಣವಾಗಿದೆ. ರಾಜಕೀಯ, ಸಾಂಸ್ಕೃತಿಕ, ಧಾರ್ವಿುಕ ಸೇರಿ ಎಲ್ಲ ರೀತಿಯ ಕ್ರೀಡೇತರ ಚಟುವಟಿಕೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ನೆಹರು ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಸ್ಮಾರ್ಟ್ ಸಿಟಿ ಯೋಜನೆ ಆರಂಭದ ಪೂರ್ವದಲ್ಲಿ ಅವಳಿ ನಗರಕ್ಕೆ ಏನು ಬೇಕು ಎಂಬುದರ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ದೊಡ್ಡ ಅಭಿಯಾನವನ್ನೇ ನಡೆಸಲಾಗಿತ್ತು. ಆಗ, ನೆಹರು ಮೈದಾನಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕೆಂದು ಯಾರೊಬ್ಬರೂ ಹೇಳಿರಲಿಲ್ಲವೇ? ಕ್ರೀಡೇತರ ಚಟುವಟಿಕೆಗಳಿಗೂ ಅವಕಾಶ ನೀಡಿ ಎಂದು ಹೇಳಿದವರು ಯಾರು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರ ನೀಡಬೇಕಿದೆ.
‘ರಾಜಕೀಯ, ಧಾರ್ವಿುಕ, ಇನ್ನಿತರ ಚಟುವಟಿಕೆಗಳಿಗೆ ನಗರದ ಹೊರ ವಲಯದಲ್ಲಿ ಸಾಕಷ್ಟು ಸ್ಥಳಗಳಿವೆ. ಕೇಶ್ವಾಪುರ, ಗಬ್ಬೂರ ಕಡೆ ಮುಂದೆ ಹೋದರೆ ಏನೂ ಅನಾನುಕೂಲ ಆಗುವುದಿಲ್ಲ. ದೊಡ್ಡ ಮಟ್ಟದ ಸಭೆ ಸಮಾರಂಭಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವವರೆಗೆ ಒಂದಿಷ್ಟು ದೂರವಾದರೆ ತೊಂದರೆ ಆಗಲಾರದು. ನೆಹರು ಮೈದಾನ ಪೂರ್ಣ ಪ್ರಮಾಣದಲ್ಲಿ ಸ್ಪೋರ್ಟ್ಸ್ ಸೆಂಟರ್ ಆಗಬೇಕು’ ಎಂಬುದು ಕ್ರೀಡಾಪಟುಗಳ ಒತ್ತಾಸೆಯಾಗಿದೆ.
1958ರಲ್ಲಿ ನಿರ್ವಣಗೊಂಡ ನೆಹರು ಮೈದಾನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿ. ‘ಈ ಮೈದಾನವನ್ನು ಕ್ರೀಡೆಗೆ ಮಾತ್ರ ಮೀಸಲಿಡಬೇಕು. ಕ್ರೀಡೇತರ ಚಟುವಟಿಕೆಗೆ ನೀಡಬಾರದು’ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಹಿಂದೆ 2-3 ಬಾರಿ ಠರಾವು ಸ್ವೀಕರಿಸಲಾಗಿದೆ. ಅದು ಕರಾರುವಕ್ಕಾಗಿ ಅನುಷ್ಠಾನಕ್ಕೆ ಬಂದಿಲ್ಲ. ಬಿಜೆಪಿಯ ಪೂರ್ಣಾ ಪಾಟೀಲ ಅವರು ಮೇಯರ್ ಆಗಿದ್ದಾಗ 2011ರ ಸೆಪ್ಟೆಂಬರ್ 29ರಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಾಡಿಗೆಯನ್ನು ದುಪ್ಪಟ್ಟು ಹೆಚ್ಚಿಸಿ ನೆಹರು ಮೈದಾನವನ್ನು ರಾಜಕೀಯ, ಧಾರ್ವಿುಕ, ಇನ್ನಿತರ ಕ್ರೀಡೇತರ ಚಟುವಟಿಕೆಗಳಿಗೆ ನೀಡಲು ಠರಾವು (ನಂ. 845) ಸ್ವೀಕರಿಸಲಾಗಿತ್ತು. ಅದರಂತೆ 2011ರ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಕ್ರೀಡೆ ಹಾಗೂ ಕ್ರೀಡೇತರ ಚಟುವಟಿಕೆಗಳಿಗೆ ಬಾಡಿಗೆ ದರವನ್ನು ಪರಿಷ್ಕರಿಸಿ ಜಾರಿಗೆ ತರಲಾಯಿತು. ರಾಜಕೀಯ ಸಭೆ ಅಥವಾ ಸಮಾರಂಭ ಹಾಗೂ ಸಂಗೀತ ಸಂಜೆ, ರಸಮಂಜರಿ ಕಾರ್ಯಕ್ರಮಗಳಿಗೆ 50 ಸಾವಿರ ರೂ., ರಾಜಕೀಯ ಪಕ್ಷಗಳ ಸಮ್ಮೇಳನ, ಪ್ರದರ್ಶನಗಳಿಗೆ 30 ಸಾವಿರ ರೂ., ಸಂಘ-ಸಂಸ್ಥೆಗಳ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ ರೂ., ಸಂಘ-ಸಂಸ್ಥೆಗಳ ಧಾರ್ವಿುಕ ಕಾರ್ಯಕ್ರಮಗಳಿಗೆ 4 ಸಾವಿರ ರೂ., ಹೀಗೆ ವಿವಿಧ ಕಾರ್ಯಕ್ರಮ, ಇವೆಂಟ್ಗಳಿಗೆ ದಿನ ಬಾಡಿಗೆ ನಿಗದಿಪಡಿಸಲಾಗಿತ್ತು. ಈ ದರ ಈಗಲೂ ಜಾರಿಯಲ್ಲಿದೆ.
ರಾಜ್ಯ ಮಟ್ಟದಿಂದ ಮುಂದಿನ ಎಲ್ಲ ಹಂತದ ಅಥ್ಲೆಟಿಕ್ ಕ್ರೀಡಾಕೂಟಗಳು ಸಿಂಥೆಟಿಕ್ ಟ್ರ್ಯಾಕ್ನಲ್ಲಿಯೇ ನಡೆಯುತ್ತವೆ. ಹುಬ್ಬಳ್ಳಿಯಲ್ಲಿ ಬಹಳ ಅಥ್ಲಿಟ್ಗಳಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ತೀರಾ ಅಗತ್ಯವಿದೆ. ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಅಥ್ಲಿಟ್ ಗಾಯಗೊಳ್ಳುವ ಸಾಧ್ಯತೆ ಕಡಿಮೆ. ಬೆಂಗಳೂರಿಗೆ ಹೋಲಿಕೆ ಮಾಡಿ ನೋಡಿದರೆ ಹುಬ್ಬಳ್ಳಿ-ಧಾರವಾಡ ಅಥ್ಲೆಟಿಕ್ಸ್ನಲ್ಲಿ ಬಹಳ ಹಿಂದಿದೆ. ನೆಹರು ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 21 ಕೋಟಿ ರೂ. ಖರ್ಚು ಮಾಡಿಯೂ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸದಿರುವುದು ಬೇಸರ ತಂದಿದೆ. | ವಿಲಾಸ ನೀಲಗುಂದ, ಅಂತಾರಾಷ್ಟ್ರೀಯ ಅಥ್ಲಿಟ್, ಕೋಚ್ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಅಭ್ಯಾಸ ಮಾಡಿದ್ದಾಗಿದ್ದರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕೂಟಗಳಲ್ಲಿ ಸುಲಭದಲ್ಲಿ ಓಡಬಹುದು. ಧಾರವಾಡ ಜಿಲ್ಲೆಯಲ್ಲಿ ಇದಕ್ಕೆ ಅವಕಾಶವಿಲ್ಲದೆ ನಾವು ಹಿಂದೆ ಉಳಿಯುತ್ತಿದ್ದೇವೆ. ಧಾರವಾಡ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತ್ರ ಸಿಂಥೆಟಿಕ್ ಟ್ರ್ಯಾಕ್ ಇದ್ದರೂ ಅಲ್ಲಿಯೂ ಒಮ್ಮೊಮ್ಮೆ ಅವಕಾಶ ಸಿಗುವುದಿಲ್ಲ. | ವಿನಾಯಕ ಸೊಟ್ಟಣ್ಣವರ್, ರಾಜ್ಯ ಮಟ್ಟದ ಅಥ್ಲಿಟ್ ಹುಬ್ಬಳ್ಳಿಯಂಥ ನಗರದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಆಗಲೇಬೇಕು. ನಾವು ವಾರಕ್ಕೆ 1-2 ದಿನ ಧಾರವಾಡಕ್ಕೆ ಹೋಗಿ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಅಭ್ಯಾಸ ಮಾಡಿಕೊಂಡು ಬರುವುದಾಗಿದೆ. ನೆಹರು ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದರೆ ವೃತ್ತಿಪರ ಅಥ್ಲೆಟ್ಗಳಿಗೆ ಸಾಕಷ್ಟು ಅನುಕೂಲವಾಗಲಿದೆ. | ಸಂಜನಾ ಮಲ್ಲಾಪುರ, ರಾಜ್ಯ ಮಟ್ಟದ ಅಥ್ಲಿಟ್ ಅವಳಿ ನಗರದಲ್ಲಿ ಸಾಕಷ್ಟು ಕ್ರಿಕೆಟ್ ಮೈದಾನ, ಸೌಲಭ್ಯಗಳಿವೆ. ಅಥ್ಲೆಟಿಕ್ಸ್ಗೆ ಸೂಕ್ತ ವ್ಯವಸ್ಥೆ ಇಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಮೈದಾನ ಇಲ್ಲವೆಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೆಹರು ಮೈದಾನ ಪೂರ್ಣ ಪ್ರಮಾಣದಲ್ಲಿ ಸ್ಪೋರ್ಟ್ಸ್ ಸೆಂಟರ್ ಆಗಬೇಕು. ಕಡ್ಡಾಯವಾಗಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕು. | ವೀರಣ್ಣ ಸವಡಿ, ಕೆಎಸ್ಸಿಎ ಧಾರವಾಡ ವಲಯ ಅಧ್ಯಕ್ಷ