

ಮೈಸೂರು: ಶುದ್ಧ ಕನ್ನಡ, ಅಚ್ಚ ಕನ್ನಡ ಎಂಬುದು ಶ್ರೇಷ್ಠತೆಯ ಸಂಕೇತ. ಇದು ಕನ್ನಡ ಭಾಷಾ ಜಾಯಮಾನಕ್ಕೆ ಒಪ್ಪುವುದಿಲ್ಲ ಎಂದು ಸಾಹಿತಿ, ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಜಯಲಕ್ಷ್ಮೀಪುರಂನ ಮಹಾಜನ ಪಿಯು ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ‘ಕನ್ನಡ ರಾಷ್ಟ್ರೀಯತೆ; ಇಂದಿನ ಸವಾಲು’ ಕುರಿತು ಮಾತನಾಡಿದರು.
ಭಾಷೆಯಲ್ಲಿ ಶ್ರೇಷ್ಠ-ಕನಿಷ್ಠ ಮಾದರಿಗಳಿಲ್ಲ. ಆದರೀಗ ಶುದ್ಧ ಕನ್ನಡ ಚರ್ಚೆ ಹುಟ್ಟು ಹಾಕುವ ಮೂಲಕ ಕನ್ನಡಕ್ಕೆ ಅನ್ಯಾಯ ಮಾಡಲಾಗುತ್ತಿದೆ. ವ್ಯಾಕರಣ ಜೋಡಣೆಯೇ ಭಾಷೆಯಲ್ಲ, ಅದು ಜನರ ನಡುವಿನ ಸಹಜಭಾಷೆ. ಆಯಾ ಪ್ರದೇಶ ಸಂಸ್ಕೃತಿಯ ಕ್ರಮವನ್ನು ಅದು ಸೂಚಿಸುತ್ತದೆ. ಶ್ರೇಷ್ಠ ಮಾದರಿ ಯಾವತ್ತೂ ಸಮಸ್ಯೆಯನ್ನೇ ಸೃಷ್ಟಿಸುತ್ತದೆ ಎಂದರು.
ಶ್ರೇಷ್ಠ ಮಾದರಿ ಇರಲ್ಲ. ಅನುಕೂಲಕರ ಮಾದರಿ ಇರುತ್ತದೆ. ಬೇರೆ ಭಾಷೆಯೊಂದಿಗೆ ಒಡನಾಟದಿಂದ ಅದು ಸಹಜವಾಗಿ ರೂಪುಗೊಳ್ಳುತ್ತದೆ. ಸುಲಲಿತ, ಅನುಕೂಲಕರವಾಗಿದ್ದರೆ ಜನರು ಬಳಸಿಕೊಂಡು ಹೋಗುತ್ತಾರೆ. ಜತೆಗೆ, ಶ್ರೇಷ್ಠ ಭಾಷೆಯ ವ್ಯಾಖ್ಯಾನ ಯಾವುದೇ ಗ್ರಂಥದಲ್ಲೂ ಇಲ್ಲ. ಭಾಷಾ ತಜ್ಞರೂ ಹೇಳಿಲ್ಲ ಎಂದರು.
ಕನ್ನಡ ರಾಷ್ಟ್ರೀಯತೆಗೆ ಕ್ರಿ.ಪೂ. ಕಾಲದಿಂದಲೂ ಸುದೀರ್ಘ ಇತಿಹಾಸ ಇದೆ. ಕರ್ನಾಟಕ ಎಂಬ ಕಲ್ಪನೆ ಗ್ರಂಥದಲ್ಲಿ ಮೂಡಿ ಬಂದಿಲ್ಲ. ಶಾಸ್ತ್ರದಲ್ಲೂ ಇಲ್ಲ. ರಾಜರು ಇದನ್ನು ಸೃಷ್ಟಿಸಿಲ್ಲ. ಕೃತಕವಾಗಿ ಯಾರೂ ಹೇರಿಲ್ಲ. ಉದ್ದೇಶಪೂರ್ವಕ ರಚನೆಯೂ ಅಲ್ಲ. ಇದು ತನ್ನಿಂದ ತಾನೇ ಹುಟ್ಟಿಕೊಂಡಿದೆ. ಅಗತ್ಯತೆ, ಸಹಜೀವನ, ವ್ಯವಹಾರದ ಮೂಲಕ ಕನ್ನಡ ರೂಪಗೊಂಡಿದೆ ಎಂದು ಹೇಳಿದರು.
ಕನ್ನಡ ರಾಷ್ಟ್ರೀಯತೆಯನ್ನು ಒಂದು ಭೌಗೋಳಿಕ ವ್ಯಾಪ್ತಿಯಾಗಿ, ರಾಜ್ಯವಾಗಿ ಸೀಮಿತಗೊಳಿಸಲಾಗುತ್ತದೆ. ರಾಷ್ಟ್ರ-ರಾಷ್ಟ್ರೀಯತೆಗೂ ವ್ಯತ್ಯಾಸವಿದೆ. ರಾಷ್ಟ್ರೀಯತೆ ಎಂದರೆ ದೇಶೀಯತೆ. ಎಲ್ಲರಲ್ಲೂ ನಾವು ಎಂಬ ಭಾವ ಮೂಡಿಸುತ್ತದೆ. ಆದರೀಗ ಕನ್ನಡ ರಾಷ್ಟ್ರೀಯತೆ ಆಪತ್ತು ಎದುರಾಗಿದೆ. ಏಕ ಸಂಸ್ಕೃತಿ, ಏಕರಾಷ್ಟ್ರೀಯತೆಯನ್ನು ಕನ್ನಡ, ತಮಿಳು, ತೆಲುಗು, ಮಲಯಾಳಂ ವಿವಿಧ ರಾಷ್ಟ್ರೀಯತೆ ಮೇಲೆ ಹೇರಲಾಗುತ್ತಿದೆ ಎಂದು ಕಿಡಿಕಾರಿದರು.
ಸಾಂಸ್ಕೃತಿಕ, ರಾಜಕೀಯದಂತೆ ಭಾಷಾ ಬಿಕ್ಕಟ್ಟನ್ನೂ ಸೃಷ್ಟಿಸಲಾಗುತ್ತಿದೆ. ಭಾಷಾವಾರು ರಾಜ್ಯಗಳನ್ನು ಕಿರಿದು ಮಾಡಲಾಗುತ್ತಿದೆ ಮತ್ತು ಸೀಮಿತಗೊಳಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಕಂಪನಿಗಳು ಏಕಾಭಿರುಚಿ, ಏಕಸಂಸ್ಕೃತಿಯನ್ನು ಸೃಷ್ಟಿ ಮಾಡಿ ಲಾಭ ಮಾಡಿಕೊಳ್ಳುತ್ತಿವೆ. ಏಕ ವಸ್ತು ಉತ್ಪಾದನೆ, ಅದಕ್ಕೆ ತಕ್ಕಂತೆ ಪ್ರಚಾರ ಮಾಡಲು ಅನುಕೂಲವಾಗಲು ಏಕ ಸಂಸ್ಕೃತಿಯನ್ನು ಸಮಾಜದ ಮೇಲೆ ಹೇರಲಾಗುತ್ತಿದೆ ಎಂದರು.
ದೇಶದಲ್ಲಿರುವುದು ಕೇಂದ್ರ ಸರ್ಕಾರವಲ್ಲ. ಅದು ಒಕ್ಕೂಟ ಸರ್ಕಾರ. ಅನುಕೂಲಕ್ಕಾಗಿ ಭಾಷೆ ರೂಪಿಸಬೇಕು. ಅದನ್ನು ಬಲವಂತವಾಗಿ ಹೇರುವುದಲ್ಲ. ಎಲ್ಲ ಭಾಷೆಗಳೂ ಸಂವಹನ ಭಾಷೆಗಳೇ. ಅವುಗಳೆಲ್ಲ ಸಮಾನ ಮಾನ್ಯತೆ, ಸ್ಥಾನಮಾನ ಕೊಡಬೇಕು ಎಂದರು.
ಅಂದು ‘ಕನ್ನಡ ಶಾಲೆ ಬೇಡ’ ಎಂದರು. ಈಗ ‘ಕನ್ನಡ ಕಲಿಯದಿದ್ದರೂ ನಡೆಯುತ್ತದೆ’ ಎಂದು ಹೇಳುತ್ತಿದ್ದಾರೆ. ಇದು ಅಂತಿಮ ಶರಣಾಗತಿ. ಸಾಂಸ್ಕೃತಿಕ ದಾಸ್ಯದ ಒಂದು ರೂಪ. ಇಂಗ್ಲಿಷ್ ಮಾಧ್ಯಮದ ಭ್ರಮೆ ಎಲ್ಲೆಡೆ ಹರಡಿಕೊಂಡಿದೆ. ಭಾಷಾ ಸಂಸ್ಕೃತಿ ವಿವೇಕರಹಿತವಾಗಿದೆ. ಭಾಷಾ ನಿರಂತರವಾಗಿರಬೇಕು. ಇಲ್ಲವಾದರೆ ಅದು ಸತ್ತು ಹೋಗುತ್ತದೆ ಎಂದು ಎಚ್ಚರಿಸಿದರು.
ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸದಿದ್ದರೆ, ಕಾಲೇಜುಗಳಲ್ಲಿ ಕನ್ನಡ ವಿಭಾಗ ಮುಚ್ಚುತ್ತವೆ. ಈಗಾಗಲೇ ಅನೇಕ ಶ್ರೀಮಂತ ಭಾಷೆಗಳು ಬರೀ ಮನೆ ಭಾಷೆಯಾಗಿ ಮಾತ್ರ ಉಳಿದುಕೊಂಡಿವೆ. ಆ ಸ್ಥಿತಿ ಕನ್ನಡಕ್ಕೆ ಬರಬಾರದು ಎಂದರು.
ಪಂಚೆಧಾರಿ ರೈತನಿಗೆ ಬೆಂಗಳೂರಿನ ಮಾಲ್‌ನ ಒಳಗೆ ಬಿಟ್ಟಿಲ್ಲ. ಇದು ಸಾಂಸ್ಕೃತಿಕ ಅಂತಃಸತ್ವ ಕುಸಿದಿರುವುದರ ದ್ಯೋತಕ. ಹೊಲಿಗೆ ಇಲ್ಲದ ಪಂಚೆಯನ್ನು ಕಟ್ಟಿಕೊಂಡವರೇ ದೇಶ, ಭಾಷೆಯನ್ನು ಕಟ್ಟಿದವರು. ಭಗವಾನ್ ಬುದ್ಧ ಸಹ ಪಂಚೆ ಮಾದರಿಯ ಉಡುಪನ್ನು ಮೈಗೆ ಸುತ್ತಿಕೊಳ್ಳುತ್ತಿದ್ದರು. ಆದಿಮಾನವನ ವಸ್ತ್ರ ಸಹ ಪಂಚೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲ ವಿಷಕಂಠಮೂರ್ತಿ, ದೇವನೂರು ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಬಾಲಸುಬ್ರಹ್ಮಣ್ಯಂ, ಹುಣಸೂರು ಬಾ.ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ.ನೀ.ಗೋ.ರಮೇಶ್, ಬಿ.ಮಟಗೆರೆಯ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ.ಸಂತೋಷ್ ಚೊಕ್ಕಾಡಿ, ಚಾಮರಾಜ ಜೋಡಿ ರಸ್ತೆಯ ಬಾ.ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಪುಟ್ಟಗೌರಮ್ಮ ಇದ್ದರು.