

ಸುನಿಲ್ ಪೊನ್ನೇಟಿ ಮಡಿಕೇರಿ:
ಭಾಗ್ಯಲಕ್ಷ್ಮೀ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನುವ ಸ್ಪಷ್ಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟಿರುವುದು ಗ್ರಾಮೀಣ ಭಾಗದ ಮಹಿಳೆಯರು ನಿಟ್ಟುಸಿರುವ ಬಿಡುವಂತೆ ಮಾಡಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಜತೆ ಜೋಡಣೆ ಮಾಡಲಾಗಿದ್ದು, ೨೦೨೩-೨೪ನೇ ಸಾಲಿಗೆ ನಾಲ್ಕನೇ ಕಂತಿನ ಹಣವನ್ನೂ ಸರ್ಕಾರ ಬಿಡುಗಡೆ ಮಾಡಿದೆ. ಕೊಡಗಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ೨,೮೯೯ ಅರ್ಜಿಗಳು ಈ ಯೋಜನೆಗಾಗಿ ಸಲ್ಲಿಕೆ ಆಗಿದೆ.
೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತ ೧೦೦೦/೯೬೪, ೨೦೧೧ರ ಜನಗಣತಿಯ ಪ್ರಕಾರ ೧೦೦೦/೯೭೩ ಆಗಿರುತ್ತದೆ. ಈ ಅನುಪಾತ ರಾಷ್ಟ್ರದ ಸರಾಸರಿ ಲಿಂಗಾನುಪಾತಕ್ಕಿಂತ ಉತ್ತಮವಾಗಿದ್ದರೂ ಹೆಣ್ಣು ಮಗುವಿನ ಸ್ಥಾನಮಾನಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸುವ ಬಗ್ಗೆ ಬಲವಾದ ವಾದವಿದೆ. ಗಂಡು ಸಂತತಿಯ ಉತ್ತೇಜನಕ್ಕೆ ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳಿದ್ದರೂ, ಇದು ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಪೋಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಅಡಚಣೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿನ ಬಗ್ಗೆ ಸಮಾಜದಲ್ಲಿರುವ ಧೋರಣೆಯನ್ನು ಬದಲಿಸಲು ೨೦೦೬-೦೭ನೇ ಸಾಲಿನ ಬಜೆಟ್ ಭಾಷಣದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತರಲಾಯಿತು.
ಹೆಣ್ಣು ಮಗು ಕುಟುಂಬಕ್ಕೆ ಹೊರೆ ಎನ್ನುವ ಮನೋಭಾವನೆ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಇದೆ. ಸರ್ಕಾರದ ಜಾಗೃತಿ ಕಾರ್ಯಕ್ರಮಗಳ ಮಧ್ಯೆಯೂ ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಹಾಕಲು ಇನ್ನು ಕೂಡ ಸಾಧ್ಯವಾಗಿಲ್ಲ. ಹೆಣ್ಣು ಮಕ್ಕಳನ್ನು ಮತ್ತು ಹೆಣ್ಣು ಹೆತ್ತವರನ್ನು ನಿಕೃಷ್ಟವಾಗಿ ಕಾಣುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಈ ಹಿನ್ನೆಲೆಯಲ್ಲಿ ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸುವ ಉದ್ದೇಶವನ್ನೂ ಭಾಗ್ಯಲಕ್ಷ್ಮೀ ಯೋಜನೆ ಹೊಂದಿದೆ.
೨೦೦೬-೦೭ ರಿಂದ ೨೦೧೯-೨೦ನೇ ಸಾಲಿನವರೆಗೆ ಭಾಗ್ಯಲಕ್ಷ್ಮೀ ಯೋಜನೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸು ಸಂಸ್ಥೆಯಾಗಿತ್ತು. ೨೦೨೦-೨೧ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಈ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಲಾಗಿದೆ. ಈಗ ಭಾಗ್ಯಲಕ್ಷ್ಮಿ -ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ ೨ ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ೩ ಸಾವಿರ ರೂ.ಗಳಂತೆ ೧೫ ವರ್ಷಗಳವರೆಗೆ ಒಟ್ಟು ೪೫ ಸಾವಿರ ರೂ.ಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ. ೨೧ ವರ್ಷ ಅವಧಿ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತ ೧.೨೭ ಲಕ್ಷ ರೂ. ನೀಡಲಾಗುತ್ತದೆ. ೧೦ ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ.೫೦ರಷ್ಟು ಭಾಗವನ್ನು ಹಿಂಪಡೆಯಲು ಯೋಜನೆಯಡಿ ಅವಕಾಶವಿದೆ.
ಭಾಗ್ಯಲಕ್ಷ್ಮೀ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆ ಜತೆ ಜೋಡಿಸಿದ ನಂತರ ಭಾಗ್ಯಲಕ್ಷ್ಮೀ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂದು ಈ ಬಗ್ಗೆ ಅರಿವಿನ ಕೊರತೆಯಿಂದ ಜನಸಾಮಾನ್ಯರ ಮಧ್ಯೆ ಗಾಳಿಸುದ್ದಿ ಹರಡಲು ಆರಂಭವಾಯಿತು. ಹಾಗಾಗಿ ೨೦೨೦-೨೧ರ ನಂತರ ಬಹುತೇಕರು ಈ ಯೋಜನೆಯಿಂದ ವಂಚಿತರಾಗುವಂತಾಯಿತು. ಸಂಬಂಧಿಸಿದ ಇಲಾಖೆಯೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿಲ್ಲ ಎನ್ನುವ ಆರೋಪವೂ ಇದೆ. ಈ ಮಧ್ಯೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭರವಸೆಯಾದ ಭಾಗ್ಯಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ವಿಧಾನಪರಿಷತ್ತಿನಲ್ಲಿ ಈಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿರುವುದು ಒಂದಿಷ್ಟು ನಿರಾಳತೆ ಮೂಡಿಸಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಆರ್ಥಿಕ ನೆರವಿನ ಮೂಲಕ ಸಬಲೀಕರಣಗೊಳಿಸಿ ಸ್ವಾವಲಂಬಿಯಾಗಿ ಮಾಡುವ ಯೋಜನೆ ಇದಾಗಿದ್ದು ೨೦೦೬ನೇ ಸಾಲಿನಿಂದ ಈ ಯೋಜನೆ ಅನುಷ್ಠಾನದಲ್ಲಿದೆ. ಇದು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲ. ರಾಜ್ಯ ಸರ್ಕಾರದ ಪ್ರತ್ಯೇಕ ಯೋಜನೆ. ಇತ್ತೀಚೆಗೆ ರಾಜ್ಯ ಸರ್ಕಾರ ಈ ಯೋಜನೆಯಲ್ಲಿ ಸ್ವಲ್ಪ ಮಾರ್ಪಾಡು ಮಾಡಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆಯಡಿ ಈ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್ ನೀಡಲಾಗುತ್ತಿತ್ತು. ಆದರೆ ಈಗ ಮಗುವಿನ ಹೆಸರಿನಲ್ಲಿ ವಾರ್ಷಿಕ ೩ ಸಾವಿರ ರೂಪಾಯಿನಂತೆ ೧೫ ವರ್ಷಗಳವರೆಗೆ ಒಟ್ಟು ೪೫ ಸಾವಿರ ರೂಪಾಯಿಗಳನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ.
ಭಾಗ್ಯಲಕ್ಷ್ಮೀ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಗೊಂದಲಗಳ ಮಧ್ಯೆ ಕೊಡಗಿನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ಯೋಜನೆಗಾಗಿ ಒಟ್ಟು ೨೭೯೯ ಅರ್ಜಿಗಳು ಸಲ್ಲಿಕೆ ಆಗಿದ್ದವು. ಇದರಲ್ಲಿ ೨೫೦೭ ಫಲಾನುಭವಿಗಳಿಗೆ ಯೋಜನೆಯ ಪಾಸ್‌ಬುಕ್ ವಿತರಿಸಲಾಗಿದೆ. ವಿವಿಧ ಕಾರಣಗಳಿಂದ ೨೯೨ ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಇದೀಗ ಈ ಯೋಜನೆಗೆ ೨೦೨೩-೨೪ನೇ ಸಾಲಿಗೆ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಆಗಿದ್ದು ಪಾಸ್‌ಬುಕ್ ವಿತರಣೆಗೆ ಬಾಕಿ ಉಳಿದುಕೊಂಡಿರುವವರಿಗೆ ಈ ಅನುದಾನದಲ್ಲಿ ಅಂಚೆ ಇಲಾಖೆ ಮೂಲಕ ಪಾಸ್‌ಬುಕ್ ಮುದ್ರಿಸಿ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡಿದೆ.