

ವಿಜಯಪುರ: ದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರನ್ನು ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿಯಾದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ವೈದ್ಯಕಿಯ ಶಿಣ ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ಸಾಮಾನ್ಯವಾಗಿ ಸಚಿವರು ದೆಹಲಿಗೆ ಹೋದಾಗ ಎಐಸಿಸಿ ಅಧ್ಯರನ್ನು ಭೇಟಿಯಾಗುವುದು ವಾಡಿಕೆ. ಹೀಗಾಗಿ ಅದೇ ರೀತಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿದ್ದಾರೆ ಎಂದು ಭಾನುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಮಾಹಿತಿ ನನಗೆ ಇಲ್ಲ. ಆ ರೀತಿಯ ಚಲನವಲನ ನಮ್ಮ ಗಮನಕ್ಕೆ ಬಂದಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಇರಬೇಕು. ಸಿಎಂ ಸಿದ್ದರಾಮಯ್ಯ 42 ವರ್ಷಗಳ ರಾಜಕೀಯ ಬದುಕಿನಲ್ಲಿ ನಿಷ್ಕಳಂಕ ನಾಯಕರಾಗಿದ್ದಾರೆ. ಸದಾ ಕಾಲ ಜನಪರ, ಬಡವರ ಪರ ಕೆಲಸ ಮಾಡುವವರು. ಹಿಂದೆ 2013&18ರಿಂದ ಐದು ವರ್ಷ ಸಿಎಂ ಆಗಿ ಪಾರದರ್ಶಕ, ಜನಪರ ಆಡಳಿತ ಕೊಟ್ಟಿದ್ದಾರೆ. ಈಗ ಸರ್ಕಾರ 5 ಗ್ಯಾರಂಟಿಗಳ ಮೂಲಕ 56 ಸಾವಿರ ಕೋಟಿ ಹಣ ಬಡವರಿಗೆ ತಲುಪಿಸಲಾಗುತ್ತಿದೆ. ಇದರಿಂದ ರಾಜ್ಯದ ಜನರ ಮನಸ್ಥಿತಿ ಬದಲಾಗುತ್ತದೆ ಎಂಬ ಭಯ ಬಿಜೆಪಿಯವರಿಗೆ ಕಾಡುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ ಮಾಡಲು ಆಗಲ್ಲ. ಪ್ರಧಾನಿ ಮೋದಿ ಕೂಡ ಹೇಳಿದ್ದರು. ಆದರೆ, ನಮ್ಮ ಸರ್ಕಾರ ಬಂದ ಮೂರು ತಿಂಗಳಲ್ಲೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದನ್ನು ಸಹಿಸಿಕೊಳ್ಳದೇ ಬಿಜೆಪಿಯವರು ಪಿತೂರಿ ಮಾಡುತ್ತಿದ್ದಾರೆ ಎಂದರು.
ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಇನ್ನೊಂದು ವರ್ಷ ಆಡಳಿತಕ್ಕೆ ಚಾಮುಂಡೇಶ್ವರಿ ದೇವಿ ಆಶೀರ್ವಾದ ಇರಲಿ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿವರ್ಷ ನಾವು ಚಾಮುಂಡೇಶ್ವರಿ ದೇಗುಲಕ್ಕೆ ಹೋಗುತ್ತೇವೆ. ದೇಗುಲಕ್ಕೆ ದಸರಾ ಸಂದರ್ಭದಲ್ಲಿ ಹೋದಾಗ ನಾವು ವರ್ಷಪೂರ್ತಿ ಆಶೀರ್ವಾದ ಇರಲಿ ಅನ್ನೋದು ಪದ್ಧತಿಯಿದೆ. ಹೀಗಾಗಿ ಪ್ರತಿವರ್ಷ ಹೋದಾಗ ನಾವು ಅದನ್ನೇ ಕೇಳಿಕೊಳುತ್ತೇವೆ. ಈ ಬಗ್ಗೆ ಈಗಾಗಲೇ ಸಿದ್ದರಾಮಯ್ಯನವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದರು.
ಸಿಎಂ ಆಗಲು ಕೆಲವರು ಸಾವಿರ ಕೋಟಿ ಹಣ ಸಂಗ್ರಹ ಮಾಡಿಕೊಂಡಿದ್ದಾರೆಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಶರಣಪ್ರಕಾಶ, ಯತ್ನಾಳ ಅವರು ಬಳಿ ಯಾವ ಮಾಹಿತಿ ಇದೆ ನನಗೆ ಗೊತ್ತಿಲ್ಲ. ಅವರು ಬಿಜೆಪಿಯ ಪ್ರಮುಖ ನಾಯಕರು. ಈ ಹಿಂದೆ 2019ರಲ್ಲಿ ಸರ್ಕಾರ ಬೀಳಿಸಲು ಬಹಳ ದೊಡ್ಡ ಹಣ ಉಪಯೋಗ ಆಗಿತ್ತು. ಸುಮಾರು 16ರಿಂದ 17 ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸಿದರು, ಇದೆಲ್ಲ ಹಣದ ಬಲದ ಮೇಲೆ ಆಗಿದೆ. ಈಗಲೂ ಅದೇ ರೀತಿ ಪಿತೂರಿ ನಡೆಯುತ್ತಿರಬಹುದು. 2019ರಿಂದ 2023 ವರೆಗೆ 4 ವರ್ಷ ಈ ರಾಜ್ಯವನ್ನು ಬಿಜೆಪಿಯವರು ವ್ಯವಸ್ಥಿತವಾಗಿ ಲೂಟಿ ಹೊಡೆದಿದ್ದಾರೆ. ಬಿಜೆಪಿಯವರು ಮಾಡಿದ ಕೆಲಸ ಕಾರ್ಯಗಳು, ಅವರು ನಡೆದುಕೊಂಡಅತಹ ರೀತಿಯನ್ನು ನೋಡಿಯೇ ರಾಜ್ಯದ ಜನರು ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ ಎಂದರು.