ಒಂದೂವರೆ ವರ್ಷವಾದರೂ ಪರಿಹಾರ ಸಿಕ್ಕಿಲ್ಲ

09 SARAG 3
Published on

ಸರಗೂರು: ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಅತ್ತ ಪರ್ಯಾಯ ವ್ಯವಸ್ಥೆಯೂ ಇಲ್ಲ, ಇತ್ತ ಪರಿಹಾರವೂ ಸಿಗದೆ ದನದ ಕೊಟ್ಟಿಗೆಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ತಾಲೂಕಿನ ಮೂಗುತನಮೂಲೆ, ಚಿಕ್ಕಬರಗಿ, ಹಾದನೂರು, ಲಂಕೆ, ಹೂವಿನಕೊಳ, ಹುಣಸಹಳ್ಳಿ, ಶಾಂತಿಪುರ, ಮುಳ್ಳೂರು, ಬಸಾಪುರ, ಬಿದರಹಳ್ಳಿ, ಕೊತ್ತೆಗಾಲ, ಕುನ್ನಪಟ್ಟಣ, ಹುನಗನಹಳ್ಳಿ, ಸರಗೂರು ಟೌನ್, ಅಡಹಳ್ಳಿ, ಚಕ್ಕೂರು, ಯಶವಂತಪುರ, ಶಿವಪುರ, ಜಯಲಕ್ಷ್ಮೀಪುರ, ಚನ್ನಗುಂಡಿ, ಬಡಗಲಪುರ ಸೇರಿದಂತೆ ಅನೇಕ ಗ್ರಾಮಗಳ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿವೆ.

ಈ ಕುಟುಂಬಗಳ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಕಣ್ಣೆತ್ತಿ ನೋಡುವ ಕಾರ್ಯ ಮಾಡಬೇಕಾಗಿದೆ. ತಾಲೂಕಿನ ಗ್ರಾಮಗಳಲ್ಲಿ ಅದೆಷ್ಟೋ ಕುಟುಂಬಗಳು ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ವರ್ಷಗಳು ಕಳೆದಿವೆ. ಆದರೆ ಬಹುತೇಕ ಸಂತ್ರಸ್ತರಿಗೆ ಪರಿಹಾರ ಮರಿಚಿಕೆಯಾಗಿದೆ. ಪರಿಹಾರ ಸಿಗದೆ ಮನೆಗಳನ್ನು ನಿರ್ಮಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ.

2021-22ನೇ ಸಾಲಿನಲ್ಲಿ ತಾಲೂಕಿನಾದ್ಯಂತ ಭಾರಿ ಮಳೆಯಾಗಿ, ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಹೀಗಾಗಿ ಬಹುತೇಕ ಮನೆಗಳು ಕುಸಿದು ಬಿದ್ದಿದ್ದವು. ಮನೆಗಳನ್ನು ಕಳೆದುಕೊಂಡು ಸಂತ್ರಸ್ತವಾಗಿರುವ ಕುಟುಂಬಗಳು ಕೊಟ್ಟಿಗೆ ಆಶ್ರಯ ಪಡೆದಿದ್ದು, ಸುಮಾರು ಒಂದೂವರೆ ವರ್ಷ ಕಳೆದರೂ ಪರಿಹಾರ ದೊರಕಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಬಾರಿ ಮನೆ ಕಳೆದುಕೊಂಡ ಜನರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಿಲ್ಲ. ಪ್ರವಾಹ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ತರ ವಾಸ್ತವ ಸ್ಥಿತಿ ನೋಡಿದ್ದಾರೆ. ಜತೆಗೆ, ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ.

ಮನೆಗಳನ್ನು ಕಳೆದುಕೊಂಡ ಬಹುತೇಕ ಕುಟುಂಬಗಳು ದನದ ಕೊಟ್ಟಿಗೆಯಲ್ಲಿ ವಾಸವಾಗಿದ್ದು, ಇವುಗಳೂ ಶಿಥಿಲಗೊಂಡಿವೆ. ಹೀಗಾಗಿ, ಯಾವ ಸಂದರ್ಭದಲ್ಲಿ ಬೀಳುತ್ತವೋ ಗೊತ್ತಿಲ್ಲ. ಆದ್ದರಿಂದ ಎಲ್ಲಿಯಾದರೂ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಸಂತ್ರಸ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮುಖಂಡರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ವಿಚಾರಿಸಿದರೆ, ಈಗಾಗಲೇ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರವಾಗಿ 1 ಲಕ್ಷ ರೂ. ನೀಡಿದ್ದೇವೆ. ಇಲಾಖೆ ಸಿಬ್ಬಂದಿ ಸಮೀಕ್ಷೆ ಮಾಡಿದ್ದು, ಸಂತ್ರಸ್ತರ ಮಾಹಿತಿ ಎಂಟ್ರಿ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ಮನೆ, ಆಸ್ತಿ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಸೂಕ್ತ ಸ್ಥಳ ಗುರುತಿಸಿ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಕಳೆದ ವರ್ಷ ವಿವಿಧ ಸಂಘಟನೆಗಳು 8 ದಿನಗಳ ಕಾಲ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ, ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಭರವಸೆ ಈಡೇರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net