ಬಿಎಸ್‌ಎನ್‌ಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಇಲ್ಲವೇ?

nrp PÜ
ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು. ಸುನೀಲ್‌ಕುಮಾರ್, ಎ.ಬಿ.ಮಂಜುನಾಥ್, ವಾಣಿ ನರೇಂದ್ರ, ಚಂದ್ರಶೇಖರ್, ರವೀಂದ್ರ ಇದ್ದರು.
Published on

ಎನ್.ಆರ್.ಪುರ: ಬಿಎಸ್‌ಎಸ್‌ಎನ್‌ಎಲ್ ಟವರ್ ನಿರ್ವಹಣೆ ಇಲ್ಲದೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತೊಂದರೆಯಾಗಿದೆ. ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ ಎಂದು ಕಡಹಿನಬೈಲು ಗ್ರಾಮಸ್ಥ ಬಿ.ಎನ್.ಸುರೇಶ್ ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಅವರಲ್ಲಿ ಮನವಿ ಮಾಡಿದರು.

ಕಡಹಿನಬೈಲು ಗ್ರಾಪಂನಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಟವರ್ ನಿರ್ವಹಣೆ ಇಲ್ಲದೆ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ. ಬಿಎಸ್‌ಎನ್‌ಎಲ್ ಇಂಜಿನಿಯರ್ ಅವರನ್ನು ಕೇಳಿದರೆ ನಿರ್ವಹಣೆಗೆ ಅನುದಾನವಿಲ್ಲ ಎಂದು ಹೇಳುತ್ತಾರೆ. ಕರೆಂಟ್ ಇಲ್ಲದಿದ್ದರೆ ನೆಟ್‌ವರ್ಕ್ ಸಿಗುವುದಿಲ್ಲ. ಆದರೆ ಹೊಸ ಟವರ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಹಳೇ ಟವರ್‌ಗಳ ನಿರ್ವಹಣೆ ಮಾಡುವವರ‌್ಯಾರು? ಇದು ಬಿಎಸ್‌ಎನ್‌ಎಲ್ ಅಧಿಕಾರಿಗಳ ಬೇಜವಾಬ್ದಾರಿ ಎಂದು ದೂರಿದರು.
ಗ್ರಾಮದ ಎಡಪಾಟ್‌ವಿಜಯನ್ ಮಾತನಾಡಿ, ನಾಟಿ ಮಾಡಿದ ಭತ್ತದ ಗದ್ದೆಗಳಿಗೆ, ಜಮೀನಿಗೆ ಜಾನುವಾರುಗಳು ನುಗ್ಗಿ ನಾಶ ಮಾಡುತ್ತಿವೆ. ಜಾನುವಾರುಗಳನ್ನು ಬೇಕಾಬಿಟ್ಟಿ ಬಿಡದಂತೆ ಜಾನುವಾರುಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಕುಡಿಯುವ ನೀರಿನ ತೊಟ್ಟಿಗಳನ್ನು ಬಹಳ ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಎಲ್ಲ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಪಿಡಬ್ಲುೃಡಿ ರಸ್ತೆಗಳ ನಿರ್ವಹಣೆ ಮಾಡುತ್ತಿಲ್ಲ. ಚರಂಡಿ, ಮೋರಿಗಳು ಕಟ್ಟಿಕೊಳ್ಳುತ್ತಿವೆ. ಇದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕಾಮಗಾರಿ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿ ಪತ್ರ ಬರೆಯಿರಿ ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಚರ್ಚಿತವಾದ ಎಲ್ಲ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಪಿಡಿಒ ಪ್ರೇಮಾ, ವಾಣಿ ನರೇಂದ್ರ, ಚಂದ್ರಶೇಖರ್, ಎ.ಬಿ.ಮಂಜುನಾಥ್, ರವೀಂದ್ರ, ಮುಖಂಡರಾದ ಜೆ.ಟಿ.ಸುರೇಂದ್ರ, ಸಚಿನ್, ಬೆಸಿಲ್, ಗೀತಾ ಬಾಬು, ಜೇಮ್ಸ್, ಸುರೇಶ್, ಎಲ್ದೋ, ಬಣಗಿ ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net