ಕೋಲಾರದಲ್ಲಿ ತಮಿಳು ಚಿತ್ರ ಪ್ರದರ್ಶಿಸುವಂತಿಲ್ಲ!

31-kolar-9
Published on

ಕಾರಂಗುಟ್ಟೆನಾರಾಯಣಸ್ವಾಮಿ ಕೋಲಾರ

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ತಮಿಳರು ಹೆಚ್ಚಾಗಿರುವ ಜಿಲ್ಲೆ ಕೋಲಾರ. ಆದರೆ ಜಿಲ್ಲಾ ಕೇಂದ್ರದಲ್ಲಿ 1973ರಿಂದ ಇಲ್ಲಿ ತನಕ ತಮಿಳು ಸಿನಿವಾ ಪ್ರದರ್ಶನ ಕಂಡಿಲ್ಲ!

ಇದಕ್ಕೆ ಕಾರಣವೂ ಇಲ್ಲದಿಲ್ಲ, ತಮಿಳರು ಶೇ.90ರಷ್ಟಿ ರುವ ಕೆಜಿಎಫ್‌ನಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಆಗ ನಡೆಯುತ್ತಿದ್ದ ದಬ್ಬಾಳಿಕೆ ವಿರೋಧಿಸಿ ಕೋಲಾರದಲ್ಲಿ 70ರ ದಶಕದಲ್ಲಿ ಕನ್ನಡಪರ ಹೋರಾಟಗಾರರು ತೆಗೆದುಕೊಂಡ ಈ ಕೆಚ್ಚೆದೆಯ ನಿರ್ಧಾರ ಇಂದಿಗೂ ಮುಂದುವರಿದಿದೆ.

1973ರಲ್ಲಿ ತಮಿಳಿನ ಎಂ.ಜಿ.ರಾಮಚಂದ್ರನ್ ಅಭಿನಯದ ‘ಉಲಗಂ ಸುಟ್ರಂ ವಾಲಿಬಾನ್’ ಚಿತ್ರ ಪ್ರಭಾತ್‌ನಲ್ಲಿ ತೆರೆ ಕಂಡಿತ್ತು. ಆಗ ಕಠಾರಿಪಾಳ್ಯದ ಚಿಕ್ಕಹನುಮಪ್ಪ, ಅ.ಕ.ಸೋಮಶೇಖರ್, ಟಿನ್‌ಫ್ಯಾಕ್ಟರಿ ಗಣೇಶ್, ಕಂಡೇರಾವ್, ಸೂರ‌್ಯನಾರಾಯಣ, ಪಿ.ಆರ್.ಗೋಪಾಲ್, ಅಶ್ವತ್ಥಪ್ಪ, ಡಿ.ಗೋಪಾಲ್ ಮತ್ತಿತರರು ನಡೆಸಿದ ಹೋರಾಟದಿಂದಾಗಿ ಕೈಗೊಂಡ ನಿರ್ಧಾರಕ್ಕೆ ಇಂದಿಗೂ ಚಿತ್ರಮಂದಿರಗಳ ವ್ಯವಸ್ಥಾಪಕರು ಕಟಿಬದ್ಧರಾಗಿದ್ದಾರೆ.

ರಾಜ್ಯದಲ್ಲಿ 1982ರಲ್ಲಿ ಡಾ.ರಾಜ್‌ಕುವಾರ್ ನೇತತ್ವದಲ್ಲಿ ನಡೆದ ಗೋಕಾಕ್ ಚಳವಳಿ, ಕಾವೇರಿ ಹೋರಾಟಗಳು, 1995ರಲ್ಲಿ ಕೆಜಿಎಫ್ ನಗರಸಭೆ ಬಸ್ ನಿಲ್ದಾಣಕ್ಕೆ ಕಾಮರಾಜನ್ ಹೆಸರಿಗೆ ಬದಲು ಕುವೆಂಪು ಹೆಸರಿಡಲು ನಡೆದ ಹೋರಾಟ, ರಾಜ್ ಅಪಹರಣ ಸಂದರ್ಭ ನಡೆದ 108 ದಿನದ ಧರಣಿ, ವಾಟಾಳ್‌ರ ಹೋರಾಟಗಳು, ಕನ್ನಡ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಟನೆಗಳ ನಿರಂತರ ಹೋರಾಟಗಳ ಫಲ ಇದಾಗಿದೆ. ಇನ್ನು ಶ್ರೀನಿವಾಸಪುರ, ಮುಳಬಾಗಿಲಿನಲ್ಲಿ ಶೇ.90ರಷ್ಟು ಜನರ ಮನೆವಾತು ತೆಲುಗು. ತೆಲುಗು ಭಾಷಿಕರೊಂದಿಗೆ ಸಂಬಂಧ ಉತ್ತಮವಿದ್ದರೂ ಸಿನಿವಾ ವಿಚಾರದಲ್ಲಿ ರಾಜೀ ಇಲ್ಲ. ಕನ್ನಡೇತರ ಭಾಷಾ ಸಿನಿವಾ ತೆರೆಗೆ ಬಂದ ಕೂಡಲೇ ಇಲ್ಲಿ ಬಿಡುಗಡೆ ವಾಡುವಂತಿಲ್ಲ, 50ದಿನ ಪ್ರದರ್ಶಿಸುವಂತೆಯೂ ಇಲ್ಲ. ಇಂತಹ ಎಚ್ಚರಿಕೆಗೆ ಚಿತ್ರಮಂದಿರಗಳ ವ್ಯವಸ್ಥಾಪಕರು ಗೌರವಕೊಟ್ಟು ‘ಕನ್ನಡ ವಾತಾವರಣ’ ಮೂಡಿಸಲು ಸಹಕರಿಸಿದ್ದಾರೆ. ಇನ್ನು ಕೋಲಾರದಲ್ಲಿ 1986ರಲ್ಲಿ ಪಲ್ಲವಿ ಚಿತ್ರಮಂದಿರ ಪ್ರಾರಂಭವಾದ ನಂತರ ಡಾ.ರಾಜ್, ಮತ್ತಿತರ ನಟರ ಚಿತ್ರಗಳು ಬಿಡುಗಡೆಯಾಗಲಾರಂಭಿಸಿದವು. ತೆಲುಗುಮಯವಾಗಿದ್ದ ವೆಂಕಟೇಶ್ವರ, ಪ್ರಭಾತ್‌ನಲ್ಲಿ ಕನ್ನಡ ಚಿತ್ರಗಳು ಬಿಡುಗಡೆ ಭಾಗ್ಯ ಕಂಡವು. ಪ್ರಸ್ತುತ ನಾರಾಯಣಿ(ಪಲ್ಲವಿ), ಭವಾನಿ, ಪ್ರಭಾತ್ ಮತ್ತು ಶಾರದಾ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು, ಹಿಂದೆ ರಾಜ್ಯೋತ್ಸವದ ದಿನ ವಾತ್ರ ಕನ್ನಡ ಸಿನಿವಾ ಪ್ರದರ್ಶಿಸುತ್ತಿದ್ದವರು ಈಗ ವರ್ಷವಿಡೀ ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ.

ಕಠಾರಿಪಾಳ್ಯಕ್ಕೆ ಅಂಜುತ್ತಿದ್ದರು: ಕನ್ನಡ ಹವಾ ಸಷ್ಠಿಗೆ ಕಠಾರಿಪಾಳ್ಯ ಹೋರಾಟಗಳೇ ಸ್ಫೂರ್ತಿ. ಹಿರಿಯ ಹೋರಾಟಗಾರರ ನಂತರ ಇಲ್ಲಿನ ವಿಶಾಲ ಕರ್ನಾಟಕ ಕನ್ನಡಿಗರ ಸಂ, ಹೋರಾಟಗಾರರಾದ ಅಂಚೆ ಅಶ್ವತ್ಥ್, ಶ್ರೀಕಷ್ಣದೇವಾರಾಯ, ಅಂಬರೀಷ್, ಡಿ.ಎಲ್.ಚಂದ್ರಶೇಖರ್ ಸೇರಿ ಹಲವರು ಕನ್ನಡದ ವಿಚಾರದಲ್ಲಿ ರಾಜೀಯಾಗುತ್ತಿರಲಿಲ್ಲ. 42ವರ್ಷದ ಹಿಂದೆ ಅದ್ಧೂರಿ ರಾಜ್ಯೋತ್ಸವಕ್ಕೆಂದೇ ಹುಟ್ಟಿಕೊಂಡ ಭುವನೇಶ್ವರಿ ಕನ್ನಡ ಸಂ ಇಂದಿಗೂ ರಾಜ್ಯೋತ್ಸವ ಆಚರಣೆಗೆ ಮುಂಚೂಣಿಯಲ್ಲಿದೆ. ವಿವಿಧ ಸಂಟನೆಗಳ ಕೋ.ನಾಪ್ರಭಾಕರ್, ಕಲಾವಿದ ವಿಷ್ಣು, ಜಯದೇವ ಪ್ರಸನ್ನ, ಶೆಟ್ಟೆಪ್ಪ, ಮುಕ್ಕಡ್ ವೆಂಕಟೇಶ್ ಸಹ ಕನ್ನಡಪರ ಹೋರಾಟ ನಡಸಿದ್ದಾರೆ.

ಕೆಜಿಎಫ್‌ನಲ್ಲೂ ಬದಲಾದ ವಾತಾವರಣ: ಕೆಜಿಎಫ್‌ನಲ್ಲಿ 80 ಮತ್ತು 90ರ ದಶಕದಲ್ಲಿದ್ದಂತಹ ತಮಿಳು ವಾತಾವರಣ ಈಗಿಲ್ಲ. ಚಿನ್ನದ ಗಣಿ ಮುಚ್ಚಿದ ನಂತರ ಗಣಿಕಾರ್ಮಿಕರ ಮಕ್ಕಳು ಕನ್ನಡ ಕಲಿತು ಬೆಂಗಳೂರು ಮತ್ತಿತರ ಕಡೆ ಉದ್ಯೋಗ ಕಂಡುಕೊಂಡಿದ್ದಾರೆ. ತಮಿಳು ರಾಜಕೀಯ ಪಕ್ಷಗಳು ಈಗ ಕೆಜಿಎಫ್‌ನಲ್ಲಿ ಇಲ್ಲ. ಕನ್ನಡಿಗ ಶಾಸಕರು ಆಯ್ಕೆಯಾಗುತ್ತಿದ್ದಾರೆ. ಕನ್ನಡ ಪ್ರೀತಿಸುವ ಮನಸ್ಸುಗಳು ಹೆಚ್ಚಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net