

ಬೆಂಗಳೂರು: ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ರಾಜಕೀಯ ಹೋರಾಟ ನಡೆದಿರುವಾಗಲೇ, ರಾಜಧಾನಿಗೆ ಕೃಷ್ಣರಾಜಸಾಗರದಿಂದ (ಕೆಆರ್‌ಎಸ್) ಕುಡಿಯುವ ನೀರು ಪೂರೈಕೆ ಸರಾಗವಾಗಿರಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಜಲಾಶಯದಲ್ಲಿ ಕಡಿಮೆ ನೀರಿದ್ದರೂ, ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದು. ಆದರೂ, ನೀರನ್ನು ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಇದರ ಹೊರತಾಗಿ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಲ್ಲಿ ನೀರು ಒದಗಿಸಲು ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಯಿಸಲು ಬಿಬಿಎಂಪಿ ಒಪ್ಪಿಗೆ ನೀಡಿದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಪ್ರದೇಶಗಳನ್ನು ಗುರುತಿಸಿ ಒಪ್ಪಿಗೆ ಪಡೆದು ಕೊಳವೆಬಾವಿ ಕೊರೆಯಿಸಬಹುದಾಗಿದೆ. ಈ ಪ್ರದೇಶಗಳಲ್ಲಿ ಮಾತ್ರ ಪಾಲಿಕೆಯಿಂದ ಟ್ಯಾಂಕ್ ಮೂಲಕವೂ ನೀರು ಪೂರೈಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಅನಧಿಕೃತ ಫ್ಲೆಕ್ಸ್ ವಿರುದ್ಧ ಕ್ರಮ:
ನಗರವನ್ನು ಅಂದಗೆಡಿಸುವ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಪಿಸಿಸಿಗೆ 50 ಸಾವಿರ ರೂ. ದಂಡ ಹಾಕಿದ್ದು, ಇತರ ಸಂಘ-ಸಂಸ್ಥೆಗಳು ಅನುಮತಿ ಇಲ್ಲದೆ ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೈಕೋರ್ಟ್ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳುತ್ತಿದ್ದು, ವಲಯಗಳಲ್ಲಿ ಸ್ಥಳೀಯ ಅಧಿಕಾರಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.