ಅನುದಾನದ ಕೊರತೆ ಇಲ್ಲ: ಶಾಸಕ ಅಬ್ಬಯ್ಯ

meeting abbayya
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಜನರಿಗೆ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು. ಅದರಲ್ಲೂ ಸ್ಲಮ್ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು, ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಕರೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿಯವರು ಫೆ. 24ರಂದು ಆಶ್ರಯ ಮನೆಗಳ ಲೋಕಾರ್ಪಣೆ ಮಾಡುವ ಬಗ್ಗೆ ಮಾಹಿತಿ ಇದೆ. ಆದರೆ ಮಂಟೂರು ರಸ್ತೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಶೀಘ್ರದಲ್ಲೇ ಮೊದಲ ಹಂತದ 1,300ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಅವುಗಳಿಗೆ ಅವಶ್ಯವಿರುವ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಸಮರೋಪಾದಿಯಲ್ಲಿ ಕಾಮಗಾರಿ ಕೈಗೊಂಡು ಫಲಾನುಭವಿಗಳಿಗೆ ಹಂಚಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಲಮ್ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.

ಅವಳಿ ನಗರದ ನೀರು ಪೂರೈಕೆ ಹೊಣೆ ಹೊತ್ತಿರುವ ಎಲ್ ಆಂಡ್ ಟಿ ಕಂಪನಿಯವರು ನಗರದ ಜನರ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ. ಸಮರ್ಪಕ ನೀರು ಪೂರೈಸಲು ಹತ್ತಾರು ಬಾರಿ ಹೇಳಿದರೂ ಯಾವುದೇ ಸುಧಾರಣೆಯಾಗಿಲ್ಲ. ಅವರ ಕೆಲಸ ತೃಪ್ತಿಕರವಾಗಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಕೂಡಲೇ ದೂರು ಸಲ್ಲಿಸಿ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆಗೆ ಕ್ರಮವಹಿಸಲು ಪಾಲಿಕೆ ಆಯುಕ್ತರಿಗೆ ಹೇಳಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಧೀಕ್ಷಕ ಇಂಜಿನಿಯರ್ ಇ. ತಿಮ್ಮಪ್ಪ, ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಎಸ್. ಜಂಗೀನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net