ಶಾಲೆಗೆ ಬಂದರೂ ಕೈಸೇರದ ವೇತನ

teacher
Published on

ಪುತ್ತೂರು: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದ್ದರಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ದ.ಕ ಜಿಲ್ಲೆಯ 9, ಉಡುಪಿ ಜಿಲ್ಲೆಯಲ್ಲಿ 8 ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ಗಳನ್ನು ಆರಂಭಿಸಲಾಗಿತ್ತು. ಇದರಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರಿಗೆ 2020ರ ಏಪ್ರಿಲ್‌ನಿಂದ ನೀಡಲು ಸರ್ಕಾರದಿಂದ ವೇತನ ಬಂದರೂ ವಿತರಣೆಯಾಗಿಲ್ಲ.

ರಾಜ್ಯಾದ್ಯಂತ ಕೆಪಿಎಸ್ ಸ್ಕೂಲ್‌ಗಳಲ್ಲಿ ಎಲ್‌ಕೆಜಿಯಿಂದ ಆಂಗ್ಲ ಮಾಧ್ಯಮ ಕಲಿಕಾ ವ್ಯವಸ್ಥೆ ಮಾಡಲಾಗಿದೆ. ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸರ್ಕಾರ ಅತಿಥಿ ಶಿಕ್ಷಕರನ್ನು ಮತ್ತು ಓರ್ವ ಆಯಾರನ್ನು ಸರ್ಕಾರ ನೇಮಿಸಿದೆ. ಅವರಿಗೆ ವಿತರಿಸಲು ವರ್ಷದಲ್ಲಿ 10 ತಿಂಗಳ ಗೌರವ ವೇತನವನ್ನು ಸರ್ಕಾರ ಏಕಕಂತಿನಲ್ಲಿ ಬಿಡುಗಡೆಗೊಳಿಸಿ ಶಾಲೆಯ ಖಾತೆಗೆ ಜಮೆ ಮಾಡುತ್ತದೆ. ಆಯಾ ಶಾಲಾ ಮುಖ್ಯಸ್ಥರು ವಿತರಣೆ ಜವಾಬ್ದಾರಿ ಹೊಂದಿರುತ್ತಾರೆ. ಅದರಂತೆ ಈ ಬಾರಿಯೂ ಲಾಕ್‌ಡೌನ್ ವೇಳೆ ಶಾಲೆಯ ಖಾತೆಗೆ ವೇತನ ಜಮೆಯಾಗಿದೆ. ಆದರೆ ವೇತನ ವಿತರಿಸದಂತೆ ಇಲಾಖೆಯಿಂದ ಸುತ್ತೋಲೆ ಬಂದಿರುವುದು ಸಮಸ್ಯೆ.

ಕರ್ತವ್ಯ ನಿರ್ವಹಿಸಿದರೂ ವೇತನ ಇಲ್ಲ: ಅತಿಥಿ ಶಿಕ್ಷಕ ಮತ್ತು ಆಯಾಗಳು ದಾಖಲಾತಿ ಮತ್ತಿತರ ಕೆಲಸಗಳಿಗೆ ಶಾಲೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಕೋವಿಡ್- 19 ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭಗೊಳ್ಳದ ಕಾರಣ ವೇತನ ಸ್ಥಗಿತಗೊಂಡಿದೆ. ಸರ್ಕಾರದಿಂದ ಸೂಚನೆ ಬಾರದಿರುವುದರಿಂದ ವೇತನ ನೀಡಲಾಗದು ಎನ್ನುತ್ತಾರೆ ಪ್ರಾಂಶುಪಾಲರು.

ಕೆಪಿಎಸ್ ಅತಿಥಿ ಶಿಕ್ಷಕ ಹಾಗೂ ಆಯಾಗೆ 10 ತಿಂಗಳ ವೇತನ ನೇರವಾಗಿ ರಾಜ್ಯ ಶಿಕ್ಷಣ ಕಚೇರಿಯಿಂದಲೇ ಶಾಲೆಗಳ ಖಾತೆಗೆ ಜಮೆಯಾಗುತ್ತದೆ. ಸರ್ಕಾರದ ಆದೇಶ, ಸುತ್ತೋಲೆ ಪ್ರಕಾರ ಶಾಲೆಯ ಪ್ರಾಂಶುಪಾಲರು ವೇತನ ವಿತರಿಸುತ್ತಾರೆ. ಇಲಾಖೆಯ ಹೊರಡಿಸಿದ ಸುತ್ತೋಲೆ ಪ್ರಕಾರ ಏಪ್ರಿಲ್‌ನಿಂದ ಅತಿಥಿ ಶಿಕ್ಷಕ ಮತ್ತು ಆಯಾಗೆ ವೇತನ ನೀಡಿಲ್ಲ. - ಮಂಜುಳಾ, ಪ್ರಭಾರ ಡಿಡಿಪಿಐ, ದಕ್ಷಿಣ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net