

ತುಮಕೂರು: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರಿಗೆ 6-7 ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಈ ನೌಕರರು ಅನಿವಾರ್ಯವಾಗಿ ಹೋರಾಟದ ಹಾದಿ ತುಳಿದಿದ್ದಾರೆ. ಹಾಗಾಗಿ, ಫೆ.5 ರಿಂದ ಎಸ್ಸಿ, ಎಸ್ಟಿ ಹಾಸ್ಟೆಲ್‌ನಲ್ಲಿ ಅಡುಗೆ ತಯಾರಿಯನ್ನೇ ಸ್ಥಗಿತಗೊಳಿಸಲಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 98 ನಿಲಯಗಳಲ್ಲಿ ಒಟ್ಟು 348 ಅಡುಗೆ ಸಿಬ್ಬಂದಿ, ಸಹಾಯಕರಿದ್ದಾರೆ. ನಗರದಲ್ಲೇ 24 ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 119 ಮಂದಿ ದುಡಿಯುತ್ತಿದ್ದು ಈ ಸಿಬ್ಬಂದಿಗೆ ಕಳೆದ 6-7 ತಿಂಗಳಿನಿಂದ ವೇತನ ನೀಡಿಲ್ಲ. ಸಂಬಳ ನೀಡದೆ ಸತಾಯಿಸುತ್ತಿರುವ ಗುತ್ತಿಗೆದಾರರು ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಹೊರಗುತ್ತಿಗೆ ಸಿಬ್ಬಂದಿಯನ್ನು ನಿಕೃಷ್ಟವಾಗಿ ಕಾಣುತ್ತಿರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕಣ್ಣುಕಿವಿ ಮುಚ್ಚಿ ಕುಳಿತಿರುವುದು ವಿಪರ್ಯಾಸವೆನಿಸಿದೆ.
ಫೆ.5 ರಿಂದ ಅಡುಗೆ ಸ್ಥಗಿತ: ನಗರದ 24 ಹಾಸ್ಟೆಲ್‌ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು, ಫೆ.5 ರಿಂದ ಅಡುಗೆ ಸಿಬ್ಬಂದಿ ಅಡುಗೆ ತಯಾರಿ ನಿಲ್ಲಿಸಿದ್ದೇ ಆದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉಪವಾಸ ಬೀಳುವಂತಾಗಲಿದೆ. ಭವಿಷ್ಯ ನಿಧಿ (ಪಿಎಫ್), ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ) ಸೌಲಭ್ಯದಿಂದಲೂ ಅಡುಗೆ ಸಿಬ್ಬಂದಿಯನ್ನು ವಂಚಿಸಿದ್ದಲ್ಲದೆ ವೇತನವನ್ನೂ ನೀಡಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.
6-7 ತಿಂಗಳಿನಿಂದ ವೇತನ ಇಲ್ಲ: ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಸಿಬ್ಬಂದಿ ವೇತನ ಬಾಕಿಯೇ 6 ಕೋಟಿ ರೂಪಾಯಿ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಹಣಕಾಸು ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ಆಕ್ಷೇಪ ತೆಗೆದಿದೆ. ನಾವು ಗುತ್ತಿಗೆದಾರರಿಗೆ ಒತ್ತಡ ಹೇರಿ ಸಂಬಳ ಕೂಡ ಹಾಕಿಸಿದ್ದೇವೆ. ತುಮಕೂರು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸೆಪ್ಟೆಂಬರ್, ನವೆಂಬರ್‌ವರೆಗೆ ಸಂಬಳ ಆಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆ ಅಡುಗೆ ಸಿಬ್ಬಂದಿ ಬಾಕಿ ವೇತನ ನೀಡಲಾಗುವುದು ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಪ್ರೇಮನಾಥ್.
ಜಿಲ್ಲೆಯಲ್ಲಿ 98 ಹಾಸ್ಟೆಲ್ : ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಡುಗೆ ಸಿಬ್ಬಂದಿ ಹಾಗೂ ಅಡುಗೆ ಸಹಾಯಕರು ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 5 ರಿಂದ ರಾತ್ರಿ 10ರವರೆಗೆ ಮೂರು ಹೊತ್ತು ವಿದ್ಯಾರ್ಥಿಗಳಿಗೆ ಚಾಚೂ ತಪ್ಪದೇ ತಿಂಡಿ, ಊಟ ಮಾಡಿಕೊಂಡು ಬರುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಊಟ ಬಡಿಸುವ ಈ ಕೈಗಳು 6-7 ತಿಂಗಳಿನಿಂದ ಕುಟುಂಬದವರನ್ನು ಉಪವಾಸ ಕೆಡವುತ್ತಿವೆ. ಬೆಂಗಳೂರಿನ ಬಾಲಾಜಿ ಸಂಸ್ಥೆ ಗುತ್ತಿಗೆ ಪಡೆದಿದ್ದು ಈವರೆಗೆ ಪಿಎಫ್, ಇಎಸ್‌ಐ ಹಣ ಕಡಿತಗೊಳಿಸಿರುವುದಕ್ಕೆ ಯಾವುದೇ ದಾಖಲೆಗಳನ್ನು ಸಿಬ್ಬಂದಿಗೆ ನೀಡಿಲ್ಲ. ವೇತನ ಕೇಳಿದರೆ ಕೆಲಸದಿಂದಲೇ ವಜಾ ಮಾಡುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆದರಿಸುತ್ತಿದ್ದಾರೆ ಎನ್ನಲಾಗಿದೆ.