

ರಾಮನಗರ: ಕರೊನಾ ಅದೆಷ್ಟೋ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಈ ಸರದಿ ಈಗ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕ್ರೖೆಸ್) ಅಧೀನದಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಪ್ರಾಂಶುಪಾಲರು ಮತ್ತು ಶಿಕ್ಷಕರದು.
ಕರೊನಾ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಪತ್ರಿಕೆಗಳ ಮೌಲ್ಯಮಾಪನ, ಆನ್ಲೈನ್ ತರಗತಿ...ಹೀಗೆ ಪ್ರತಿಯೊಂದು ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರೂ, ನೀವು ಕೆಲಸವನ್ನೇ ಮಾಡಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಸುಮಾರು ಒಂದು ಸಾವಿರ ಶಿಕ್ಷಕರಿಗೆ ಕಳೆದ 7 ತಿಂಗಳಿಂದ ವೇತನ ನೀಡದೆ ಕಷ್ಟದ ಕೂಪಕ್ಕೆ ತಳ್ಳಿದೆ.
ಅವರಿಗೆ ಕೊಟ್ಟರೂ ಇವರಿಗಿಲ್ಲ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಮುರಾರ್ಜಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು, ಮಾದರಿ ವಸತಿ ಶಾಲೆಗಳ ಹೊರ ಗುತ್ತಿಗೆ ಶಿಕ್ಷಕರಿಗೆ ಆ.26ರಂದೇ ವೇತನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಇವರಷ್ಟೇ ಕೆಲಸ ಮಾಡಿದ್ದರೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಕ್ರೖೆಸ್ ಅಧೀನದಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಸಂಬಳವಿಲ್ಲ. ಇವರಿಗೂ ವೇತನ ಬಿಡುಗಡೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿದ್ದರು. ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಕಾರಜೋಳ ಸೂಚಿಸಿದ್ದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವುದು ನೊಂದ ಸಿಬ್ಬಂದಿಯ ಅಳಲು.
ಸ್ಪಷ್ಟ ಉಲ್ಲಂಘನೆ: ಕ್ರೖೆಸ್ ಅಧೀನದಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಸಂಬಳ ನೀಡದಿರುವುದು ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ ಎನ್ನುವುದು ಶಿಕ್ಷಕರ ಆರೋಪ. ಸಂಬಳ ಪಡೆಯದ ಶಿಕ್ಷಕರಲ್ಲಿ 500ಕ್ಕೂ ಹೆಚ್ಚು ಮಂದಿ ಕೋರ್ಟ್ ಮಧ್ಯಂತರ ಆದೇಶದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸಂಬಳ ನೀಡದಿರುವಂತಿಲ್ಲ ಅಥವಾ ಕೆಲಸದಿಂದ ತೆಗೆದು ಹಾಕುವಂತಿಲ್ಲ ಎನ್ನುವುದು ಶಿಕ್ಷಕರ ವಾದ.
ಬದುಕು ಬೀದಿಗೆ: ಕಳೆದ 12-15 ವರ್ಷಗಳಿಂದ ಸುಮಾರು 532 ಮಂದಿ ಹಾಗೂ ತೀರಾ ಇತ್ತೀಚಿನ ವರ್ಷಗಳಲ್ಲಿ ಸುಮಾರು 500 ಮಂದಿ ಪ್ರಾಂಶುಪಾಲರು ಮತ್ತು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2006ರಲ್ಲಿ ತಿಂಗಳಿಗೆ ಕೇವಲ 3,300 ರೂ. ವೇತನ ಪಡೆಯುತ್ತಿದ್ದ ಗುತ್ತಿಗೆ ಸಿಬ್ಬಂದಿಗೆ ಈಗ 8,825 ರೂ. ಸಂಬಳ ನೀಡಲಾಗುತ್ತಿದೆ. ಸೇವೆ ಕಾಯಂಗೊಳಿಸಬೇಕು ಎಂದು ಹೋರಾಟ ನಡೆಸುತ್ತಿದ್ದ ಶಿಕ್ಷಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶದ ಮೇಲೆ ಇಂದಲ್ಲ ನಾಳೆ ಸೇವೆ ಕಾಯಂ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, 7 ತಿಂಗಳಿಂದಲೂ ಸಂಬಳ ಸಿಗದೆ ಇರುವುದು ಶಿಕ್ಷಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಡಿ ಗ್ರೂಪ್ ಸಿಬ್ಬಂದಿಗೆ ಸಂಬಳ ನೀಡಲಾಗಿದೆ. ಶಿಕ್ಷಕರಿಗೆ ಸಂಬಳ ಬಿಡುಗಡೆಯಾಗಿಲ್ಲ. ಈ ಸಂಬಂಧ ಕ್ರೖೆಸ್ ವರದಿ ಕೇಳಿತ್ತು. ವರದಿಯನ್ನು ಸಲ್ಲಿಸಲಾಗಿದೆ. | ಎಸ್. ಕೃಷ್ಣಪ್ಪ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಾಮನಗರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಮುರಾರ್ಜಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು, ಮಾದರಿ ವಸತಿ ಶಾಲೆಗಳ ಹೊರಗುತ್ತಿಗೆ ಶಿಕ್ಷಕರಿಗೆ ಸಂಬಳ ನೀಡಲಾಗಿದೆ. ನಾವು ಸಹ ಕರೊನಾ ಅವಧಿಯಲ್ಲಿ ದುಡಿದಿದ್ದೇವೆ. ಸರ್ಕಾರ ಹೀಗೇಕೆ ತಾರತಮ್ಯ ಮಾಡುತ್ತಿದೆ ? ನಮ್ಮ ನೋವಿಗೆ ಸರ್ಕಾರ ಸ್ಪಂದಿಸಲಿ. | ಹೆಸರು ಹೇಳಲಿಚ್ಛಿಸದ ನೊಂದ ಶಿಕ್ಷಕ
ಗಂಗಾಧರ್ ಬೈರಾಪಟ್ಟಣ