ಹೊಸದಾಗಿ ನೇಮಕಗೊಂಡ ಶಿಕ್ಷಕರಿಗಿಲ್ಲ ಸಂಬಳ!

Ddpi Office
Published on

ರಾಯಚೂರು: ಕಲ್ಯಾಣ ಭಾಗದ ಜಿಲ್ಲೆಗಳಲ್ಲಿ 20220-23ನೇ ಸಾಲಿನಲ್ಲಿ ನೇಮಕಗೊಂಡಿರುವ ಶಿಕ್ಷಕರಿಗೆ ಕಳೆದ ಏಳು ತಿಂಗಳಿಂದ ಸಂಬಳ ಪಾವತಿಯಾಗದೆ ಸಮಸ್ಯೆಯಾಗದೆ ಸಮಸ್ಯೆ ಎದುರಿಸುವಂತಾಗಿದೆ. ಎನ್‌ಪಿಎಸ್, ಕೆಜಿಐಡಿ ಪ್ರಕ್ರಿಯೆಯಲ್ಲಿನ ವಿಳಂಬ ಇದಕ್ಕೆ ಕಾರಣವಾಗಿದೆ.
ಏಳು ಜಿಲ್ಲೆಗಳ ಪ್ರಾಥಮಿಕ ಶಾಲೆಗಳಲ್ಲಿನ 6 ರಿಂದ 8ನೇ ತರಗತಿಗೆ ನ.4 ಮತ್ತು 5ರಂದು ಕೌನ್ಸೆಲಿಂಗ್ ನಡೆಸಿ ಒಟ್ಟು ಜಿಲ್ಲೆಯಲ್ಲಿ 702 ಸೇರಿದಂತೆ ಏಳು ಜಿಲ್ಲೆಗಳಲ್ಲಿ ಒಟ್ಟು 11,734 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅದಾದ ನಂತರದಲ್ಲಿ ಅವರಿಗೆ ಸ್ಥಳ ನಿಯೋಜನೆ ಮಾಡಲಾಗಿತ್ತು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಕರ ಕೊರತೆಯನ್ನು ಮನಗಂಡು ಸರ್ಕಾರ ಈ ಭಾಗದಲ್ಲಿ ಶಿಕ್ಷಕರ ನೇಮಕಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಜತೆಗೆ ಇನ್ನೂ ಖಾಲಿ ಉಳಿದ ಶಿಕ್ಷಕರ ಸ್ಥಾನಗಳಿಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದರ ಜತೆಗೆ ಕೆಕೆಆರ್‌ಡಿಬಿಯಿಂದ ಅತಿಥಿ ಶಿಕ್ಷಕರನ್ನು ಒದಗಿಸಲಾಗಿತ್ತು.
ಹೊಸದಾಗಿ ನೇಮಕಗೊಂಡ ಶಿಕ್ಷಕರು ಎನ್‌ಪಿಎಸ್ ಅಡಿಯಲ್ಲಿ ಬರುತ್ತಿರುವುದರಿಂದ ಅವರ ದಾಖಲೆಗಳನ್ನು ಎನ್‌ಪಿಎಸ್‌ನಲ್ಲಿ ಸೇರ್ಪಡೆ ಮಾಡುವುದು ಹಾಗೂ ಕೆಜಿಐಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಜತೆಗೆ ಶಿಕ್ಷಕರ ಸೇವಾ ಮಾಹಿತಿ (ಇಇಡಿಎಸ್)ನಲ್ಲಿ ಹೊಸದಾಗಿ ನೇಮಕಗೊಂಡ ಶಿಕ್ಷಕರ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು.
ಈ ಎಲ್ಲ ಪ್ರಕ್ರಿಯೆಗಳು ನಡೆಯಲು ವಿಳಂಬವಾಗುತ್ತಿರುವುದರಿಂದ ಸಂಬಳ ಬಿಡುಗಡೆಗೆ ಸಮಸ್ಯೆಯಾಗುತ್ತಿದೆ. ಶಿಕ್ಷಕರು ಆನ್‌ಲೈನ್‌ನಲ್ಲಿ ಮಾಹಿತಿಯನ್ನು ತುಂಬಿದ ನಂತರದಲ್ಲಿ ಆಯಾ ತಾಲೂಕು ಬಿಇಒಗಳು ಅದನ್ನು ಪರಿಶೀಲಿಸಿ ಡಿಡಿಪಿಐ ಕಚೇರಿಗೆ ಕಳಿಸಿದ ನಂತರದಲ್ಲಿ ಸಂಬಳ ಪಾವತಿಗೆ ಕ್ರಮಕೈಗೊಳ್ಳಲಾಗುತ್ತಿದೆ.
ಶಿಕ್ಷಕರ ಸ್ಥಳ ನಿಯೋಜನೆ ಸೇರಿದಂತೆ ನೇಮಕಾತಿ ಪ್ರಕ್ರಿಯೆ ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಂಡಿದ್ದು, ಅದಾದ ನಂತರ ಪರೀಕ್ಷಾ ತಯಾರಿ, ರಜೆಗಳು ಬಂದ ಕಾರಣಕ್ಕಾಗಿ ಎನ್‌ಪಿಎಸ್, ಕೆಜಿಐಡಿ ಸೇರ್ಪಡೆ ಪ್ರಕ್ರಿಯೆ ವಿಳಂಬವಾಗಿ ವೇತನ ಪಾವತಿ ತಡವಾಗುವಂತಾಗಿದೆ.
ಶಿಕ್ಷಕರಾಗಿ ನೇಮಕಗೊಂಡ ಖುಷಿಯಲ್ಲಿದ್ದ ಶಿಕ್ಷಕರಿಗೆ ಕಳೆದ ಏಳು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಬಹುತೇಕರು ತಮ್ಮ ಸ್ವಂತ ಊರುಗಳನ್ನು ಬಿಟ್ಟು ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದು, ಖರ್ಚು ವೆಚ್ಚಗಳಿಗೆ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ತಾಂತ್ರಿಕ ಸಮಸ್ಯೆ ನಿವಾರಿಸಿ ವೇತನ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

ಪಾವತಿಗೆ ಸಮಸ್ಯೆಯೇನು?
ಯಾವುದೇ ಸರ್ಕಾರಿ ನೌಕರಿಗೆ ಸೇರಿದ ನಂತರದಲ್ಲಿ ಅವರ ಮಾಹಿತಿಯನ್ನು ಆಯಾ ಇಲಾಖೆಗಳ ನಿಬಂಧನೆಗೆ ಒಳಪಟ್ಟಂತೆ ಸ್ಟಾವೇರ್‌ನಲ್ಲಿ ಅಳವಡಿಸಬೇಕಾಗುತ್ತಿದೆ. ಹೊಸದಾಗಿ ನೇಮಕಗೊಂಡ ಶಿಕ್ಷಕರು ಎನ್‌ಪಿಎಸ್ ಅಡಿಯಲ್ಲಿ ಬರುವುದರಿಂದ ವೇತನದಲ್ಲಿ ಪ್ರತಿ ತಿಂಗಳು ಕಡಿತವಾಗುವ ಹಣ ಮತ್ತು ಲೆಕ್ಕಾಚಾರಗಳನ್ನು ಜತೆಗೆ ಕೆಜಿಐಡಿ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗುತ್ತದೆ. ಜತೆಗೆ ಎಚ್‌ಆರ್‌ಎಂಎಸ್ ಸಿದ್ಧಪಡಿಸಿ, ಇಇಡಿಎಸ್‌ನಲ್ಲಿ ಶಿಕ್ಷಕರ ಸಂಪೂರ್ಣ ಮಾಹಿತಿ ಎಂಟ್ರಿ ಮಾಡಬೇಕು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಒಂದೆರಡು ತಿಂಗಳು ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಹೊಸದಾಗಿ ನೇಮಕಗೊಂಡ ಶಿಕ್ಷಕರ ಎನ್‌ಪಿಎಸ್, ಕೆಜಿಐಡಿ ಮತ್ತು ಇಇಡಿಎಸ್ ಮಾಹಿತಿಯನ್ನು ಕ್ರೋಢಿಸಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗಿದೆ. ಆಯಾ ತಾಲೂಕುಗಳ ಬಿಇಒಗಳು ಶಿಕ್ಷಕರ ಮಾಹಿತಿಯನ್ನು ಭರ್ತಿ ಮಾಡಿ ಕಳುಹಿಸುತ್ತಿದ್ದು, ಹಂತ ಹಂತವಾಗಿ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗುತ್ತಿದೆ.

  • ಕೆ.ಡಿ.ಬಡಿಗೇರ, ಡಿಡಿಪಿಐ, ರಾಯಚೂರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net