

ಶಿರಸಿ: ನೆರೆ ರಾಜ್ಯದ ಜಾನುವಾರುಗಳಿಗೆ ಕರ್ನಾಟಕದ ಅರಣ್ಯ ಪ್ರವೇಶಕ್ಕೆ ನಿಷೇಧ ಎಂಬ ಅರಣ್ಯ ಸಚಿವರ ಹೇಳಿಕೆ ಕಾನೂನು ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಕರ್ನಾಟಕ ಅರಣ್ಯ ನಿಯಮದ ಅಡಿ ಜಾನುವಾರು ಮೇಯಿಸುವಿಕೆಗೆ ರಾಜ್ಯಪಾಲರ ಆದೇಶ ಅನುಸಾರ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯೊಂದಿಗೆ ಕರ್ನಾಟಕ ಸರ್ಕಾರವು 1991ರ ಜು.20ರಂದು ಹೊರ ರಾಜ್ಯದ ಪ್ರಾಣಿಗಳಿಗೆ ರಾಜ್ಯದಲ್ಲಿ ಮೇಯಿಸುವಿಕೆಗೆ ಅವಕಾಶ ನೀಡಿದ ಆದೇಶವನ್ನು ನಗರದಲ್ಲಿ ಪ್ರದರ್ಶಿಸಿ ಅವರು ಮಾತನಾಡಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾನೂನಿಗೆ ವ್ಯತಿರಿಕ್ತವಾಗಿ ನೀಡುವ ಆದೇಶಗಳು, ಅರಣ್ಯವಾಸಿಗಳಿಗೆ ಮತ್ತು ರೈತರಲ್ಲಿ ಗೊಂದಲ ಉಂಟು ಮಾಡುತ್ತಿದೆ. ರಾಜ್ಯ ಸರ್ಕಾರವು ರಾಜ್ಯದ ಅರಣ್ಯಗಳಲ್ಲಿ ಜಾನುವಾರು ಮೇಯಿಸುವಿಕೆಯನ್ನು ಕ್ರಮಬದ್ಧಗೊಳಿಸಿ ಮೀಸಲು ಮತ್ತು ಸಂರಕ್ಷಿತ ಅರಣ್ಯದಲ್ಲಿ ಮೇಯಿಸಲು ಪರಿಷ್ಕೃತ ದರಗಳನ್ನು ನಿಗದಿಗೊಳಿಸಿ ಮೇಯಿಸುವಿಕೆಗೆ ಅವಕಾಶ ಇದ್ದಾಗಲೂ ಸಹ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನೀಡಿದ ಸಚಿವರ ಹೇಳಿಕೆಯ ಮೌಲ್ಯ ಪರಿಶೀಲಿಸುವುದು ಅನಿವಾರ್ಯವಾಗಿದೆ ಎಂದರು.
ಆನೆಗೆ 100, ಎಮ್ಮೆಗೆ 25 ರೂ.
1991ರ ಜುಲೈ 20ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಇತರ ರಾಜ್ಯಗಳ ಪ್ರಾಣಿಗಳನ್ನು ನಮ್ಮ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಮೇಯಿಸಲು ನಿರ್ದಿಷ್ಟ ದರ ನಿಗದಿಗೊಳಿಸಲಾಗಿದೆ. ಹೊರ ರಾಜ್ಯದ ಆನೆಗೆ ಪ್ರತಿ ದಿನಕ್ಕೆ 100 ರೂ., ಒಂಟೆಗೆ ದಿನಕ್ಕೆ 50 ರೂ., ಎಮ್ಮೆಗೆ ವರ್ಷಕ್ಕೆ 25 ರೂ., ಹಸು, ಕರು, ಕತ್ತೆ, ಹೋರಿ, ಮುಂತಾದ ಪ್ರಾಣಿಗಳಿಗೆ ಪ್ರತಿ ವರ್ಷ ಪ್ರತಿ ಪ್ರಾಣಿಗೆ 15ರೂ. ಹಾಗೂ ಟಗರು, ಕುರಿಗಳಿಗೆ ವರ್ಷಕ್ಕೆ ತಲಾ 10 ರೂ. ಎಂದು ನಿಗದಿಗೊಳಿಸಿ ಪರವಾನಗಿ ಮೇರೆಗೆ ಇತರ ರಾಜ್ಯಗಳ ಪ್ರಾಣಿಗಳನ್ನು ಕರ್ನಾಟಕ ರಾಜ್ಯದಲ್ಲಿ ಮೇಯಿಸುವಿಕೆಗೆ ಮುಕ್ತಗೊಳಿಸಿದೆ. ರಾಜ್ಯ ಸರ್ಕಾರ 34 ವರ್ಷಗಳ ಹಿಂದೆಯೇ ಈ ಆದೇಶ ಮಾಡಿರುವುದು ಗಮನಾರ್ಹ ಅಂಶ. ಅರಣ್ಯ ಕಾನೂನಿಗೆ ಸಂಬಂಧಪಟ್ಟಂತೆ ಅರಣ್ಯ ಸಚಿವರು ಅರಣ್ಯ ಕಾನೂನಿಗೆ ಮತ್ತು ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕವಾಗಿ ಗೊಂದಲ ಮೂಡಿಸುತ್ತಿದ್ದಾರೆ ಎಂದಿದ್ದಾರೆ.