ಸಕಲೇಶಪುರ ತಾಲೂಕು ಕಚೇರಿಯಲ್ಲಿ ಅಧ್ವಾನಗಳಿಗೆ ಆಸ್ಪದ ನೀಡಲ್ಲ

21 skpp 3
ಸಕಲೇಶಪುರ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂನಲ್ಲಿ ತಹಸೀಲ್ದಾರ್ ಸುಪ್ರೀತಾ ಪರಿಶೀಲನೆ ನಡೆಸಿದರು.
Published on

ಸಕಲೇಶಪುರ: ಟಪಾಲು ವಿಭಾಗ ಹಾಗೂ ದಾಖಲೆಗಳ ಕೊಠಡಿ ಸರಿಯಾಗಿ ಇದ್ದರೆ ಮಾತ್ರ ಕಚೇರಿ ಸರಿ ಇರಲಿದೆ. ಇಲ್ಲಿ ಯಾವುದೂ ಸರಿ ಇಲ್ಲ. ಇನ್ನು ಮುಂದೆ ಇಂಥ ಅಧ್ವಾನಗಳಿಗೆ ಆಸ್ಪದ ನೀಡುವುದಿಲ್ಲ ಎಂದು ತಾಲೂಕು ಕಚೇರಿ ಅವ್ಯವಸ್ಥೆ ಕಂಡು ತಹಸೀಲ್ದಾರ್ ಕೆ.ಎಂ.ಸುಪ್ರೀತಾ ಕಿಡಿಕಾರಿದರು.

ಸೋಮವಾರ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ತಾಲೂಕು ಕಚೇರಿಯ ಟಪಾಲು ಸೆಕ್ಷನ್‌ಗೆ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು. ಕಚೇರಿಯಲ್ಲಿ ಯಾವುದು ಸರಿ ಇಲ್ಲ, ಬೇಕಾಬಿಟ್ಟಿ ನಿರ್ವಹಣೆ ಮಾಡಿದರೆ ಕಚೇರಿ ನಿರ್ವಹಿಸುವುದು ಹೇಗೆ, ಟಪಾಲು ಸ್ವೀಕಾರ ಹಾಗೂ ನಿರ್ಗಮನದ ರಿಜಿಸ್ಟರ್‌ನಲ್ಲಿ ಸಹಿ ಇಲ್ಲ. ಯಾರು ಕಡತ ಪಡೆದರು ಎಂಬುದನ್ನು ಹೇಗೆ ಪತ್ತೆ ಮಾಡುತ್ತೀರಾ ಎಂದು ಟಪಾಲು ವಿಭಾಗದ ಗುಮಾಸ್ತ ಮನು ಅವರನ್ನು ಪ್ರಶ್ನಿಸಿದರು.

ಇದಕ್ಕೆ ಕಳೆದ ಎರಡು ತಿಂಗಳಿನಿಂದ ಟಪಾಲು ಸ್ವೀಕರಿಸುತ್ತಿಲ್ಲ ಎಂಬ ಉತ್ತರ ನೀಡಿದರು. ಎರಡು ತಿಂಗಳಿನಿಂದ ಕಡತಗಳೇ ಮುಂದೆ ಹೋಗದಿದ್ದರೆ ರೈತರು ಸುಮ್ಮನೆ ಇರುತ್ತಾರಾ, ಇಂಥ ನಿರ್ಲಕ್ಷ್ಯದ ನಡೆ ಮುಂದೆ ನಡೆಯುವುದಿಲ್ಲ. ಇವರನ್ನು ಬದಲಿಸಿ ಸಮರ್ಥ ವ್ಯಕ್ತಿಯನ್ನು ನೇಮಿಸಿ ಎಂದು ಶಿರಸ್ತೇದಾರ್ ರವಿಕುಮಾರ್ ಅವರಿಗೆ ಸೂಚಿಸಿದರು.

ನಂತರ ಕೋರ್ಟ್ ರಿಜಿಸ್ಟರ್ ನೀಡಿ ಎಂದರು. ಇದಕ್ಕೆ ಕೋರ್ಟ್ ರಿಜಿಸ್ಟರ್ ಇಲ್ಲ ಎಂಬ ಉತ್ತರ ನೀಡಿದರು. ಹೀಗೆಂದರೆ ಏನ್ರೀ ಕೋರ್ಟ್ ರಿಜಿಸ್ಟರ್ ಇಲ್ಲ ಎಂದರೆ ಅರ್ಥ ಏನು, ಕಚೇರಿ ಅಧ್ವಾನ ನಿಮ್ಮ ಗಮನಕ್ಕೂ ಬಂದಿಲ್ವ ಎಂದು ಗ್ರೇಡ್-2 ತಹಸೀಲ್ದಾರ್ ಮೋಹನ್‌ಕುಮಾರ್ ಅವರನ್ನು ಪ್ರಶ್ನಿಸಿ ರೆಕಾರ್ಡ್ ರೂಂ ವ್ಯವಸ್ಥಾಪಕ ಅಂಜನ್‌ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಕೋರ್ಟ್ ರಿಜಿಸ್ಟರ್ ಬಗ್ಗೆ ವಿಚಾರಿಸಿದರು. ಇವರು ಉತ್ತರ ನೀಡಲು ತಡಬಡಾಯಿಸಿದ್ದರಿಂದ ಇವರಿಗೆ ನೋಟಿಸ್ ನೀಡಿ ಎಂದು ಗ್ರೇಡ್ 2 ತಹಸೀಲ್ದಾರ್‌ಗೆ ಸೂಚಿಸಿದರು.

ಇನ್ನೂ ಮುಂದೆ ಟಪಾಲು ಸ್ವೀಕರಿಸುವವರು ಹಾಗೂ ಪಡೆಯುವವರ ಸಹಿಯನ್ನು ಕಡ್ಡಾಯವಾಗಿ ಪಡೆಯಬೇಕು. ಅಂದಿನ ಟಪಾಲುಗಳನ್ನು ಅಂದೇ ನಿರ್ವಹಣೆ ಮಾಡಬೇಕು ಎಂದು ಸೂಚಿಸಿ ರೆಕಾರ್ಡ್ ರೂಂ ಪರಿಶೀಲಿಸಿದರು. ಪ್ರತಿದಿನ 10 ಸಾವಿರ ರೆಕಾರ್ಡ್‌ಗಳು ಡಿಜಿಟಿಲಿಕರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಗಮನಹರಿಸಬೇಕು. ರೈತರ ಕೆಲಸಗಳಿಗೆ ಸಮಯ ತೆಗೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net