ತಾಲೂಕು ಕೇಂದ್ರದಲ್ಲಿಲ್ಲ ನಾಡ ಕಚೇರಿ!

Navalagund Tahasildar Office
Published on

ನವಲಗುಂದ: ಸಾಮಾನ್ಯವಾಗಿ ಕಂದಾಯ ಇಲಾಖೆ ದಾಖಲೆಗಳನ್ನು ಪಡೆಯಲು ಜನರು ಪಟ್ಟಣಕ್ಕೆ ಬರುವುದು ಸಾಮಾನ್ಯ ಆದರೆ ಇದಕ್ಕೆ ವ್ಯತಿರಿಕ್ತವಾಗಿ ನವಲಗುಂದದ ಜನ ಹಳ್ಳಿಗೆ ತೆರಳಿ ದಾಖಲೆಗಳನ್ನು ಪಡೆಯಬೇಕಾದ ಪರಿಸ್ಥಿತಿ ಇದೆ.

ಕಂದಾಯ ನಿರೀಕ್ಷಕರಿಲ್ಲ: ರಾಜ್ಯದ ಎಲ್ಲ ತಾಲೂಕುಗಳಲ್ಲಿ ತಾಲೂಕು ಕೇಂದ್ರಕ್ಕೆ ಕಂದಾಯ ನಿರೀಕ್ಷಕರ ಹುದ್ದೆ ಇರುತ್ತದೆ ಆದರೆ ನವಲಗುಂದಕ್ಕೆ ಮಾತ್ರ ಈ ಹುದ್ದೆಯನ್ನು ಮೊರಬ ಗ್ರಾಮಕ್ಕೆ ಮಂಜೂರಿ ಮಾಡಿರುವುದರಿಂದ ಜನರು ದಾಖಲೆಗಳಿಗಾಗಿ ಹಳ್ಳಿಗೆ ಅಲೆದಾಡುವ ಸ್ಥಿತಿ ನಿರ್ವಣವಾಗಿದೆ.

ಸ್ವಾತಂತ್ರ್ಯ ಬಂದು 70 ದಶಕಗಳು ಗತಿಸಿದರೂ ತಾಲೂಕು ಕೇಂದ್ರಕ್ಕೆ ಕಂದಾಯ ನಿರೀಕ್ಷಕರ ಹುದ್ದೆ ಇಲ್ಲದಿರುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪ್ರಸ್ತಾವನೆ ಮೂಲೆಗುಂಪು: ಅಣ್ಣಿಗೇರಿ ಹಾಗು ನವಲಗುಂದ ತಾಲೂಕು ಕೇಂದ್ರಗಳನ್ನು ವಿಂಗಡಣೆ ಮಾಡುವ ವೇಳೆಯಲ್ಲಿ ಶಲವಡಿ ಹಾಗೂ ನವಲಗುಂದ ಎರಡು ಹೋಬಳಿಗಳನ್ನು ವಿಗಂಡಸಿ ಎರಡು ಹೊಸ ಕಂದಾಯ ನಿರೀಕ್ಷಕರ ಹುದ್ದೆಗಳನ್ನು ನೇಮಕ ಮಾಡಬೇಕೆಂದು ಸಲಹೆಗಳನ್ನು ನೀಡಿ ಯೋಜಾನಾ ವರದಿಯನ್ನು ಸಿದ್ಧಪಡಿಸಿ ನೀಡಲಾಗಿತ್ತು. ಆದರೆ ಅದು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಹೇಸರುಹೇಳಲಿಚ್ಚಿಸದ ತಹಸೀಲ್ದಾರ್ ಒಬ್ಬರು.

ಇದ್ದೂ ಇಲ್ಲದಂತಾದ ನಾಡಕಚೇರಿ: ತಾಲೂಕು ಕೇಂದ್ರದಲ್ಲಿ ನಾಡ ಕಚೇರಿಯೇನೋ ಇದೆ. ಆದರೆ ಕಂದಾಯ ನಿರೀಕ್ಷಕರೇ ಇಲ್ಲದಿರುವುದರಿಂದ ಕಚೇರಿ ಇದ್ದೂ ಇಲ್ಲದಂತಾಗಿದೆ. ಸಾರ್ವಜನಿಕರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲೂಕು ಕೇಂದ್ರದಿಂದ 40 ಕಿಮೀ. ದೂರದ ಮೊರಬ ಗ್ರಾಮಕ್ಕೆ ಸಂಚರಿಸುವುದು ತಪ್ಪದಂತಾಗಿದೆ.

ಅಣ್ಣಿಗೇರಿ ಮೊರಬ ಹೋಬಳಿ ವಿಂಗಡಣೆಯಿಂದ ಪಟ್ಟಣ ಜನತೆ ಸೇರಿದಂತೆ ಗ್ರಾಮೀಣ ಭಾಗದ ಜನರು ಸಮಸ್ಯೆ ಎದುರಿಸುವಂತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಿನ ತಾಲೂಕು ಕಚೇರಿಯಲ್ಲಿ ನಾಡ ಕಚೇರಿ ಆರಂಭಿಸಿದ್ದೇವೆ ಎಂದು ಸ್ವಲ್ಪ ದಿನ ಅರ್ಜಿಗಳನ್ನು ಸ್ವೀಕರಿಸಿದರು. ಈಗ ಅದು ಬಂದಾಗಿದೆ. ಮೊರಬಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿ ಕಳುಹಿಸುತ್ತಾರೆ. ಎಷ್ಟು ದಿನ ಈ ಸಮಸ್ಯೆ ಎದುರಿಸಬೇಕು? ಶಾಸಕರು ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.| ಬಸವರಾಜ ಉಳ್ಳಾಗಡ್ಡಿ ರೈತ ಮುಖಂಡ, ಗುಡಿಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net