ಟೋಲ್‌ಗೇಟ್ ರದ್ದತಿಗೆ ಸಿಗದ ಸ್ಪಂದನೆ

dvd toll meeting
ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ದೇವದುರ್ಗದ ಎರಡು ಟೋಲ್‌ಗೇಟ್ ರದ್ದು ಕುರಿತು ತುರ್ತು ಸಭೆ ನಡೆಯಿತು. ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು, ಶಾಸಕರಾದ ಕರೆಮ್ಮ ಜಿ.ನಾಯಕ, ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ ಇದ್ದರು.
Published on

ದೇವದುರ್ಗ: ಟೋಲ್‌ಗೇಟ್ ರದ್ದತಿಗಾಗಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಸೂಕ್ತ ಸ್ಪಂದನೆ ಸಿಗದ ಕಾರಣ ಶಾಸಕಿ ಕರೆಮ್ಮ ಜಿ.ನಾಯಕ ಸಭೆಯ ಅರ್ಧದಲ್ಲಿ ಹೊರನಡೆದರು. ಅಲ್ಲದೆ ಟೋಲ್ ರದ್ದು ಮಾಡದಿದ್ದರೆ ಮುಂದಿನ ಅಧಿವೇಶನದಲ್ಲೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ, ತಿಂಥಣಿ ಬ್ರಿಡ್ಜ್-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಆರಂಭಿಸಿದ ಟೋಲ್‌ಗೇಟ್‌ಗಳು ತಾಲೂಕಿನ ಜನರ ಜೀವಹಿಂಡುತ್ತಿವೆ. ತಾಲೂಕು ಅತ್ಯಂತ ಹಿಂದುಳಿದಿದ್ದು ದಲಿತರು, ಬಡವರು, ರೈತರು, ಕೂಲಿಕಾರರು ಹೆಚ್ಚಾಗಿ ನೆಲೆಸಿದ್ದಾರೆ. ಹೇಳಿಕೊಳ್ಳುವಂಥ ಅಭಿವೃದ್ಧಿ, ಕೈಗಾರಿಕೆಗಳು ಇಲ್ಲ. ಆದರೆ, ಸರ್ಕಾರ ಕೆಆರ್‌ಡಿಸಿಎಲ್ ಮೂಲಕ ನಮ್ಮ ಗಮನಕ್ಕೆ ತಾರದೆ ಎರಡು ಟೋಲ್‌ಗೇಟ್ ಆರಂಭಿಸಿದೆ. ಇದು ಅವೈಜ್ಞಾನಿಕವಾಗಿ 73 ಕಿಮೀ ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್ ಮಾಡಲಾಗಿದೆ.

40 ಕಿಮೀ ಅಂತರದಲ್ಲಿ ಎರಡು ಟೋಲ್‌ಗೇಟ್ ಯಾಕೆ ಮಾಡಿದ್ದೀರಿ?. ನಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಟೋಲ್ ಏಷ್ಯಾ ಖಂಡದಲ್ಲೇ ಅತ್ಯಂತ ಹಿಂದುಳಿದ ತಾಲೂಕಿನಲ್ಲಿ ಯಾಕೆ ಸ್ಥಾಪಿಸಿದ್ದೀರಿ?. ಇದರಿಂದ ತಾಲೂಕಿನ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಜನರು ನಿತ್ಯ ಹೋರಾಟ ಮಾಡುತ್ತಿದ್ದಾರೆ. ತಕ್ಷಣವೇ ಟೋಲ್‌ಗೇಟ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸರ್ಕಾರ ಟೋಲ್‌ಗೇಟ್ ಆರಂಭಿಸಿದ ನಂತರ ರದ್ದು ಮಾಡಲು ಬರಲ್ಲ. ರಸ್ತೆ ಸರಿಯಿಲ್ಲದಿದ್ದರೆ ರಿಪೇರಿ ಮಾಡಿಕೊಡುತ್ತೇವೆ. ಅಗತ್ಯ ಸೌಲಭ್ಯ, ಬಸ್ ತಂಗುದಾಣ, ಪಾರ್ಕಿಂಗ್ ಸೇರಿ ವಿವಿಧ ಕೆಲಸಕ್ಕೆ ಅನುದಾನ ನೀಡಲಾಗುವುದು. ಎಲ್ಲ ಸೌಲಭ್ಯ ಕಲ್ಪಿಸಿದ ನಂತರ ಟೋಲ್ ಶುಲ್ಕ ಪ್ರಾರಂಭಿಸುತ್ತೇವೆ ಎಂದರು. ಇದರಿಂದ ಸಿಟ್ಟಿಗೆದ್ದ ಶಾಸಕಿ ಕರೆಮ್ಮ ಜಿ.ನಾಯಕ, ಟೋಲ್‌ರದ್ದು ಆಗುವವರೆ ನನ್ನ ಹೋರಾಟ ನಿಲ್ಲುವುದಿಲ್ಲ. ಅಧಿವೇಶನದಲ್ಲೂ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿ ಸಭೆಯಿಂದ ಹೊರನಡೆದರು.

ಜಿಲ್ಲಾ ಉಸ್ತುವಾರಿ ಡಾ.ಶರಣಪ್ರಕಾಶ ಪಾಟೀಲ್, ಸಚಿವ ಎನ್.ಎಸ್.ಬೋಸರಾಜು, ಕೆಆರ್‌ಡಿಸಿಎಲ್ ಅಧ್ಯಕ್ಷ ಬಾಲಕೃಷ್ಣ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಂಎಲ್ಸಿ ಎ.ವಸಂತಕುಮಾರ ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net