ಕಾವೇರಿ ವಿವಾದ ಬಗೆಹರಿಸಲು ಮೋದಿಯಿಂದ ಸ್ಪಂದನೆ ದೊರೆತ್ತಿಲ್ಲ : ಸಿದ್ದರಾಮಯ್ಯ

siddaramaiah
Published on

ಮೈಸೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರದ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಿ ವಾಸ್ತವ ಪರಿಸ್ಥಿತಿ ಅವಲೋಕಿಸಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಇದುವರೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಚಡ್ಡಿ ಚಳವಳಿ ಮಾಡುವುದನ್ನು ಬಿಟ್ಟು ರಾಜ್ಯಕ್ಕೆ ಕೇಂದ್ರದ ತಜ್ಞರ ತಂಡವನ್ನು ಕರೆಸುವ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.

ಉತ್ತಮ ಮಳೆಯಾದ ಸಾಮಾನ್ಯ ವರ್ಷಗಳಲ್ಲಿ ತಮಿಳುನಾಡಿಗೆ 177.25 ಟಿಎಂಸಿ ನೀರು ಹರಿಸಬೇಕು ಎಂದು ಆದೇಶವಾಗಿದೆ. ಆದರೆ, ಮಳೆ ಬಾರದೆ ಸಂಕಷ್ಟದ ಎದುರಾದ ಸಂದರ್ಭ ಎಷ್ಟು ನೀರು ಹರಿಸಬೇಕು ಎಂಬ ಫಾರ್ಮುಲ ರಚನೆಯಾಗಿಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆಯಲ್ಲಿ ಎರಡು ರಾಜ್ಯಗಳ ನಡುವೆ ಮಾತುಕತೆ ನಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಅವಶ್ಯಕತೆ ಇದೆ. ನ್ಯಾಯಾಲಯದಿಂದ ಆಚೆಗೆ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳುವುದು ಉತ್ತಮ ಅಭಿಪ್ರಾಯಪಟ್ಟರು.

ಕಾವೇರಿ ನದಿ ನೀರು ಹಂಚಿಕೆ ವಿವಾದ ಪರಿಹರಿಸುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ. ಆದರೆ, ರಾಜ್ಯದ ಹಿತ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂಬ ದೇವೇಗೌಡರ ಹೇಳಿಕೆ ಸರಿಯಲ್ಲ. ರಾಜ್ಯದ ಜನರ ಹಿತ ಕಾಪಾಡಲು ಸರ್ಕಾರ ಎಂದೂ ಹಿಂದೆ ಬಿದ್ದಿಲ್ಲ. ನಮಗೆ ಅಧಿಕಾರ ಮುಖ್ಯವಲ್ಲ, ನಮಗೆ ರಾಜ್ಯದ ಜನರ ಹಿತ ಮುಖ್ಯ. ಜೆಡಿಎಸ್‌ಗೆ ಇದೀಗ ಬಿಜೆಪಿಯೊಂದಿಗೆ ಹೊಸ ಪ್ರೇಮ ಶುರವಾಗಿದ್ದು, ಅವರು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ ಎಂದು ತಿರುಗೇಟು ನೀಡಿದರು.

ಕಾವೇರಿ ವಿಚಾರವಾಗಿ ಬಿಜೆಪಿಯವರು ಚಡ್ಡಿ ಚಳವಳಿ ನಡೆಸುತ್ತಿದ್ದಾರೆ. ಬಿಜೆಪಿಯವರನ್ನು ನಾವು ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ, ಈಗ ಅವರು ಚಡ್ಡಿ ಚಳುವಳಿ ಮಾಡುತ್ತಿದ್ದಾರೆ. ಅವರು ಚಳವಳಿ ಮಾಡಲಿ ಮಾಡಲಿ ನಮ್ಮ ಅಭ್ಯಂತರವೇನು ಇಲ್ಲ. ಬಿಜೆಪಿ ಸೇರಿದಂತೆ ಯಾರೇ ಆದರೂ ಪ್ರತಿಭಟನೆ ನಡೆಸಲಿ, ನಾವು ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ರಾಜಕೀಯ ಲಾಭಕೋಸ್ಕರ ಪ್ರತಿಭಟನೆ ಮಾಡಬಾರದು, ರಾಜ್ಯದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಎಂದರು.

ಬಂದ್, ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ, ಯಾವುದೇ ರೀತಿಯ ಬಂದ್ ನಡೆಸಬಾರದು ಎಂಬ ಸುಪ್ರೀಂಕೋರ್ಟ್ ಆದೇಶವಿದೆ. ನಮಗೆ ಹೇಗೆ ಪ್ರತಿಭಟಿಸುವ ಹಕ್ಕು ಇದೆಯೋ ಅದೇ ರೀತಿ ಜನಸಾಮಾನ್ಯರಿಗೂ ಅವರದ್ದೇ ಹಕ್ಕುಗಳು ಇದ್ದು, ಪ್ರತಿಭಟನೆಯಿಂದ ಅವರ ಹಕ್ಕುಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಜನರ ಹಕ್ಕನ್ನು ರಕ್ಷಿಸಿಸುವುದು ಸರ್ಕಾರದ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರ ವಿಫಲವಾಗಿದೆ ಎಂಬ ಆರೋಪ ಸರಿಯಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದ್ದ ಕಾನೂನು ತಜ್ಞರ ತಂಡವೇ ಈಗಲೂ ಇದ್ದು, ಕಾನೂನು ತಜ್ಞರ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ನದಿ ನೀರು ಉಳಿಸಿಕೊಳ್ಳಲು ನಾವು ಸಮರ್ಥವಾಗಿ ವಾದ ಮಂಡಿಸಿದ್ದೇವೆ, ಮುಂದೆಯೂ ಸಮರ್ಥವಾಗಿ ವಾದ ಮಂಡಿಸುತ್ತೇವೆ ಎಂದರು.

ಬಿಜೆಪಿ ಯಾವ ಟೀಂ?
ರಾಜ್ಯ ಕಾಂಗ್ರೆಸ್ ಡಿಎಂಕೆಯ ‘ಬಿ ಟೀಮ್’ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಎಐಎಡಿಎಂಕೆ ಬಿಜೆಪಿಯೊಂದಿಗೆ ಇತ್ತಲ್ಲ ಆಗ ಅದು ಯಾವ ಟೀಂ ಆಗಿತ್ತು? ಸುಮ್ಮನೆ ರಾಜಕೀಯ ಕಾರಣಕ್ಕೆ ಎನೇನೋ ಹೇಳಿಕೆ ಕೊಡಬಾರದು.
ಕೇಂದ್ರದಲ್ಲಿ ಬಿಜೆಪಿ 9 ವರ್ಷಗಳ ಕಾಲ ನುಡಿದಂತೆ ನಡೆದಿಲ್ಲ. ಹೀಗಾಗಿ ದೇಶದಲ್ಲಿ ಬಿಜೆಪಿ ವಿರುದ್ಧವಾದ ಶಕ್ತಿಗಳು ಒಗ್ಗೂಡುತ್ತಿವೆ. ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಸಮಾಜ ಒಡೆಯುವ ಕಾರ್ಯ ಮಾಡಿದರು. ಈ ಸತ್ಯ ಗೊತ್ತಾದ ಮೇಲೆ ಅನೇಕ ಶಕ್ತಿಗಳು ಬಿಜೆಪಿಯೇತರ ಗುಂಪಿನಲ್ಲಿ ಸೇರಿಕೊಂಡಿವೆ ಎಂದರು.
ಚುನಾವಣೆಗೋಸ್ಕರ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಿತು. ಈ ಮಸೂದೆ ಮುಂದಿನ ಬಾರಿಯ ಲೋಕಸಭೆ ಚುನಾವಣೆಗೆ ಜಾರಿಗೆ ಬರುವುದಿಲ್ಲ. ಅವರಿಗೆ ನಿಜವಾಗಿಯೂ ಮಹಿಳೆಯರ ಮೇಲೆ ಕಾಳಜಿ ಇದ್ದಿದ್ದರೆ ಈಗಿನ ಜನಸಂಖ್ಯೆಗೆ ಅನುಗುಣವಾಗಿ ಡಿ ಲಿಮಿಟೇಷನ್ ಮಾಡಿ ಮಹಿಳೆಯರಿಗೆ ಮೀಸಲಾತಿ ನೀಡಲಿ. ಮತ ಪಡೆಯುವ ಏಕೈಕ ಉದ್ದೇಶದಿಂದ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net