

ಮೈಸೂರು: ಪರಿಶಿಷ್ಟ ಪಂಗಡದ ಅಭಿವೃದ್ಧಿಗೋಸ್ಕರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀಸಲಾತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಈ ಸೌಲಭ್ಯವನ್ನು ಮತಾಂತರಗೊಂಡವರಿಗೆ ನೀಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮಸಿದ್ಧಿ ಆಗ್ರಹಿಸಿದರು.
ಗಿರಿಜನ ಸುರಕ್ಷಾ ವೇದಿಕೆ ವತಿಯಿಂದ ನಗರದ ಮಹಾರಾಜ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗಿರಿಜನ ಸಂರಕ್ಷಣಾ ಸಮ್ಮೇಳನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮಾಯಕ ಬಡಕಟ್ಟು ಜನರಿಗೆ ಆಮಿಷೆಗಳನ್ನು ಒಡ್ಡಿ ಅವ ರನ್ನು ಮತಾಂತರ ಮಾಡುವ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತಾಂತರ ಮಾಡುವವರು ನಮ್ಮ ಮುಂದೆ ಬಂದರೆ ನಾವು ಒಗ್ಗಟ್ಟಾಗಿ ನಿಲ್ಲಬೇಕು. ಮತಾಂತರಗೊಂಡವರನ್ನು ಬುಡಕಟ್ಟು ಪಟ್ಟಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ 700ಕ್ಕೂ ಹೆಚ್ಚು ಗಿರಿಜನ ಪಂಗಡಗಳ ಕಲ್ಯಾಣಕೋಸ್ಕರ ಮೀಸಲಾತಿ ಮತ್ತು ವಿವಿಧ ಸರ್ಕಾರಿ ಸವಲತ್ತುಗಳನ್ನು ನೀಡಲಾಗುತ್ತಿದೆ. ಈ ಮೀಸಲಾತಿ ಅರ್ಹ ಗಿರಿಜನರಿಗೆ ಮಾತ್ರ ದೊರೆಯಬೇಕು. ಯಾವುದೇ ಕಾರಣಕ್ಕೂ ಮತಾಂತರಗೊಂಡವರಿಗೆ ಮೀಸಲಾತಿ ಹಾಗೂ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳನ್ನು ನೀಡಬಾರದು ಎಂದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಜಡೇಗೌಡ ಮಾತನಾಡಿ, ದೇಶದ ವಿವಿಧೆಡೆ ನೆಲೆಸಿರುವ ಪರಿಶಿಷ್ಟ ಪಂಗಡದವರಿಗೆ ಆಮಿಷೆಗಳನ್ನು ಒಡ್ಡಿ ಅವರನ್ನು ಮತಾಂತರ ಮಾಡುತ್ತಿರುವ ಪ್ರಕ್ರಿಯೆ ಸ್ವಾತಂತ್ರೃ ಪೂರ್ವದಿಂದಲೂ ನಡೆದುಕೊಂಡು ಬಂದಿದೆ. ಮತಾಂತರದಿಂದ ಬುಡಕಟ್ಟು ಸಮುದಾಯದವರ ಆಚಾರ, ವಿಚಾರ, ಸಂಸ್ಕೃತಿ ನಾಶವಾಗುತ್ತಿದೆ. ಮತಾಂತರಕ್ಕೆ ಕಡಿವಾಣ ಹಾಕಲು ಮತಾಂತರಗೊಂಡವರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.