

ಕಡಬ: ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ಆಲಂಕಾರು- ಸುರುಳಿ- ಮಾಪಲ ರಸ್ತೆ ಅಭಿವೃದ್ಧಿಯಲ್ಲಿ ಈ ಭಾಗದ ಸೇತುವೆಗಳಿಗೆ ದುರಸ್ತಿ ಭಾಗ್ಯ ಕೂಡಿಬಂದಿಲ್ಲ. ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರು ಕಾಮಗಾರಿ ಸಾಗುತ್ತಿದ್ದು, ಕುಸಿದು ಬೀಳುವ ಹಂತದಲ್ಲಿರುವ ಸೇತುವೆಗಳಿಗೆ ಅನುದಾನ ಕೊರತೆ ಕಾಡುತ್ತಿದೆ.
5 ಕೋಟಿ ರೂ. ಅನುದಾನದಲ್ಲಿ 2020ರಿಂದ ಈ ಕಾಮಗಾರಿ ಆರಂಭವಾಗಿದ್ದು, ಕಾಮಗಾರಿ ನಿಧಾನಗತಿಯಲ್ಲೇ ಸಾಗುತ್ತಿದೆ. ಆಲಂಕಾರಿನಿಂದ ಮಾಪಲದವರಿಗಿನ 3.5 ಕಿ.ಮೀ. ರಸ್ತೆಯನ್ನು 5.5 ಅಡಿ ವಿಸ್ತರಣೆ ಮತ್ತು ಡಾಂಬರು ಕಾಮಗಾರಿ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಬರುವ ಎರಡು ಕಿರು ಸೇತುವೆಗಳಿಗೆ ಅನುದಾನ ಕೊರತೆಯಿಂದಾಗಿ ದುರಸ್ತಿ ಹಾಗೂ ವಿಸ್ತರಣೆ ಕೈಬಿಟ್ಟು ಕಾಮಗಾರಿ ನಡೆಸಲಾಗುತ್ತಿದೆ.
ತೀರಾ ನಾದುರಸ್ತಿಯಲ್ಲಿರುವ ಸುರುಳಿ ಸೇತುವೆಗಳು ಮುಂದಿನ ದಿನಗಳಲ್ಲಿ ಕುಸಿಯುವ ಮೊದಲು ಕಾಯಕಲ್ಪವಾಗಬೇಕಾಗಿದೆ. ಈ ರಸ್ತೆಯು ಮೈಸೂರು- ಮಡಿಕೇರಿ- ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಸಂಪರ್ಕ ರಸ್ತೆಯಾಗಿದೆ. ಈಗಾಗಲೇ ಕುಮಾರಧಾರಾ ನದಿಯ ಶಾಂತಿಮುಗೇರು ಎಂಬಲ್ಲಿ ಸೇತುವೆ ನಿರ್ಮಾಣವಾಗಿದ್ದು, ಸಂಚಾರಕ್ಕೆ ಮುಕ್ತವಾದ ಬಳಿಕ ಈಗ ಮೈಸೂರಿನಿಂದ ಸುಳ್ಯ- ಬೆಳ್ಳಾರೆ- ಸವಣೂರು- ಶಾಂತಿಮೊಗೇರು- ಆಲಂಕಾರು- ನೆಲ್ಯಾಡಿ- ಧರ್ಮಸ್ಥಳಕ್ಕೆ ಸುಲಭ ಸಂಪರ್ಕ ಕಲ್ಪಿಸುತ್ತಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಡಿಕೇರಿ- ಸಂಪಾಜೆ- ಮೈಸೂರು ರಾಜ್ಯ ಹೆದ್ದಾರಿಗೆ, ಜಾಲ್ಸೂರು- ಸುಬ್ರಹ್ಮಣ್ಯ- ಬೆಂಗಳೂರು ಹೆದ್ದಾರಿಗೆ, ಸುಬ್ರಹ್ಮಣ್ಯ- ಮಂಜೇಶ್ವರ- ಕಾಸರಗೋಡು ಹೆದ್ದಾರಿಗಳಿಗೆ ಈ ರಸ್ತೆ ಸಂಪರ್ಕ ಕೊಂಡಿಯಾಗಿದ್ದು, ಮುಂದಿನ ದಿನಗಳಲ್ಲಿ ಅತೀ ಹೆಚ್ಚು ವಾಹನ ಸಂಚಾರಕ್ಕೆ ಪೂರಕ ರಸ್ತೆಯಾಗಲಿದೆ. ರಸ್ತೆ ಅಭಿವೃದ್ಧಿ ಪೂರ್ಣಗೊಂಡ ಬಳಿಕ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಲಿದ್ದು, ಕಿರಿದಾದ ಸೇತುವೆಗಳಿಂದಾಗಿ ಅಪಾಯಗಳು ಎದುರಾಗಲಿವೆ.
ಕ್ರಿಯಾ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಮಾತ್ರ ಅನುದಾನ ಬಿಡುಗಡೆಯಾಗಿದೆ. ಕಿರಿದಾದ ಸೇತುವೆಗಳ ಬಗ್ಗೆ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ಸೇತುವೆಗಳ ದುರಸ್ತಿ ಕಾರ್ಯ ಅಸಾಧ್ಯ. ಎರಡು ಕಿರು ಸೇತುವೆಗೆ ಎರಡು ಬದಿಗಳಲ್ಲಿ ತಡೆಗೋಡೆ ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಎಲ್.ಸಿ ಸಿಕ್ವೇರಾ ಲೋಕೋಪಯೋಗಿ ಇಲಾಖಾ ಪುತ್ತೂರು ವಿಭಾಗ ಕಿರಿಯ ಇಂಜಿನಿಯರ್