

ಚಿತ್ರದುರ್ಗ: ರಾಜ್ಯದ ಬೆಂಗಳೂರು ಜಿಲ್ಲೆಯಲ್ಲಿ ಪರೀಕ್ಷೆ ವೇಳೆ ನಕಲು ನಡೆದಿದ್ದು, ಅಲ್ಲಿ ಮರು ಪರೀಕ್ಷೆ ನಡೆಸಲಿ. ಆದರೆ, ಇಡೀ ರಾಜ್ಯಕ್ಕೆ ಅನ್ವಯಿಸಬಾರದು ಎಂದು ಆಗ್ರಹಿಸಿ ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ವಿದ್ಯಾರ್ಥಿ ಸಮೂಹಕ್ಕೆ ಅನ್ಯಾಯವಾಗದಂತೆ ಮಧ್ಯ ಪ್ರವೇಶಿಸಿ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಜಿಎನ್‌ಎಂ ನರ್ಸಿಂಗ್ ಸಂಬಂಧ ಪ್ರಥಮ ಹಾಗೂ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ 2022ರ ನವೆಂಬರ್ 22ರಿಂದ 25ರವರೆಗೂ ನಡೆದಿದ್ದು, 23ರಂದು ನಕಲು ನಡೆದಿತ್ತು ಎಂದು ಗೊತ್ತಾದ ನಂತರವೂ ಉಳಿದ ಪರೀಕ್ಷೆಗಳನ್ನು ನಡೆಸಿದ್ದು, ಏಕೆ ಎಂದು ಪ್ರಶ್ನಿಸಿದರು.
88 ಸಾವಿರ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಯಾರೋ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮರು ಪರೀಕ್ಷೆ ಸಂಬಂಧ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದರಿಂದ ಅನೇಕರ ಆರೋಗ್ಯ ಹಾಳಾಗಿದೆ. ಕೇವಲ 10 ದಿನದೊಳಗೆ ನಡೆಸುವುದು ಹೇಗೆ ಸಾಧ್ಯ? ವಿದ್ಯಾರ್ಥಿ ಸಮೂಹ ಪರೀಕ್ಷೆ ಜತೆಗೆ ಆಸ್ಪತ್ರೆಗಳ ಕರ್ತವ್ಯ, ತರಗತಿಗಳಿಗೆ ಹಾಜರಾಗಬೇಕಿದೆ. 3 ವರ್ಷದಲ್ಲಿ ಮುಗಿಸುವ ಕೋರ್ಸ್ ಅನ್ನು 6 ವರ್ಷಕ್ಕೆ ದೂಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕರೊನಾ ಕಾರಣಕ್ಕೆ ಪ್ರಥಮ ವರ್ಷದ ವಿದ್ಯಾಭ್ಯಾಸಕ್ಕೆ ಪೆಟ್ಟು ಬಿದ್ದಿತ್ತು. ಈಗ ಮರು ಪರೀಕ್ಷೆ ಹೆಸರಿನಲ್ಲಿ ಎರಡನೇ ವರ್ಷ ತೊಂದರೆ ನೀಡುವುದು ಸೂಕ್ತವಲ್ಲ. ಆದ್ದರಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರಿದರು.
ವಿದ್ಯಾರ್ಥಿಗಳಾದ ಎ.ಜಿ.ಭಾವನಾ, ಎಂ.ಪೂಜಾ, ಎನ್.ಸುಚಿತ್ರಾ, ಎಚ್.ಕೆ.ಕಾವ್ಯಾ, ಆರ್.ಮಂಜುಳಾ, ಎಲ್.ಲಾವಣ್ಯಾ, ಡಿ.ಎಂ.ಶಿಲ್ಪಾ, ಎಸ್.ಎನ್.ತನುಶ್ರೀ, ಎಸ್.ಕಾವ್ಯಾ, ಕೆ.ತ್ರಿವೇಣಿ, ಟಿ.ಪಲ್ಲವಿ, ಬಿ.ನಿಖಿತಾ, ಕೆ.ಸಿ.ಸುಮಾ, ಆರ್.ಮೇಘಾ, ಪಿ.ಎಸ್.ಭೂಮಿಕಾ, ರಕ್ಷಿತಾ, ಜಿ.ಕಲ್ಪನಾ, ಪಿ.ಸೌಜನ್ಯಾ, ಎಂ.ಯಶಸ್ವಿನಿ, ಟಿ.ದರ್ಶನ್ ಇತರರಿದ್ದರು.