ವರ್ಗಾವಣೆಯಾದ ಶಿಕ್ಷಕರ ಮರು ನೇಮಕ ಬೇಡ

klg
Published on

ಕಲಘಟಗಿ: ತಾಲೂಕಿನ ಕುರುವಿನಕೊಪ್ಪ ಸರ್ಕಾರಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಮರಳಿ ನಮ್ಮ ಶಾಲೆಗೆ ನೇಮಕ ಮಾಡಬಾರದು ಎಂದು ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಅವರಿಗೆ ಎಸ್‌ಡಿಎಂಸಿ ಪದಾಧಿಕಾರಿಗಳು ಇತ್ತೀಚೆಗೆ ಮನವಿ ಸಲ್ಲಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎನ್.ವೈ. ಧಾರವಾಡ ಮಾತನಾಡಿ, ಕುರುವಿನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಮುಖ್ಯಾಧ್ಯಾಪಕ ಹಾಗೂ ಶಿಕ್ಷಕರಾಗಿದ್ದವರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಇದರಿಂದ ಶೈಕ್ಷಣಿಕ ಗುಣಮಟ್ಟದಲ್ಲಿ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದೆ ಬಿದ್ದಿದೆ. ಮಕ್ಕಳು ಅನುಚಿತ ವರ್ತನೆ ತೋರುತ್ತಿದ್ದಾರೆ. ಶಿಕ್ಷಕರಲ್ಲಿ ರಾಜಕೀಯ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ, ಶಿಕ್ಷಕರ ಕೊರತೆಯ ಕಾರಣದಿಂದ ವರ್ಗಾವಣೆ ಆದವರನ್ನೇ ಮರಳಿ ಇದೇ ಶಾಲೆಗೆ ನೇಮಕ ಮಾಡುವ ಮಾತು ಕೇಳಿಬಂದಿದ್ದು, ಯಾವುದೇ ಕಾರಣಕ್ಕೂ ಈ ಶಿಕ್ಷಕರು ಮರಳಿ ಬರುವುದು ಬೇಡ ಎಂದು ಒತ್ತಾಯಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಎನ್.ಬಿ. ಹೆಬ್ಬಾಳ, ವಿಜಯಲಕ್ಷ್ಮೀ ಹರಿಜನ, ಶಿವಾನಂದ ಬಾಗೂನವರ, ಸುಭಾಸ ರೇವಡ್ಯಾಳ, ಉಮೇಶ ರಾಯನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net