ಗೃಹಲಕ್ಷ್ಮಿಗಿಲ್ಲ ಪಡಿತರ ಚೀಟಿ, ಮನೆ

31 hos 2
ಸಮುದಾಯ ಭವನದಲ್ಲಿ ಮಗಳ ಜತೆ ಶಶಿಕಲಾ.
Published on

ಹೊಸನಗರ: ಹೆಣ್ಣು ಸಮಾಜದ ಕಣ್ಣು ಅಂತಾರೆ. ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬುದು ಎಲ್ಲರ ಆಶಯ. ಆದರೆ ಇಲ್ಲೊಂದು ಕುಟುಂಬಕ್ಕೆ ಪಡಿತರ ಚೀಟಿಯೇ ಇಲ್ಲ. ಮದುವೆಯ ಆರಂಭದಲ್ಲೇ ಪತಿಯನ್ನು ಕಳೆದುಕೊಂಡ ಈ ಬಡತಾಯಿಗೆ ಪ್ರಾಯಕ್ಕೆ ಬಂದ ಅಂಗವಿಕಲ ಮಗಳನ್ನು ಆರೈಕೆ ಮಾಡುವುದೇ ಸವಾಲು. ಇಷ್ಟಕ್ಕೂ ಸಮುದಾಯ ಭವನದಲ್ಲಿಯೇ ಇವರ ವಾಸ.
ಹೌದು, ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮೇಲಿನಸಂಪಳ್ಳಿ ಅಂಬೇಡ್ಕರ್ ಕಾಲನಿ ಶಶಿಕಲಾ ಅವರ ದೈನೇಸಿ ಸ್ಥಿತಿ.
ಶಶಿಕಲಾ ಅವರು 15 ವರ್ಷದ ಹಿಂದೆಯೇ ಪತಿಯನ್ನು ಕಳೆದುಕೊಂಡ ನೃತದೃಷ್ಟೆ. ಆದರೂ ತಾನು ಹೆತ್ತ ಮಗಳ ಭವಿಷ್ಯದ ಕನಸು ಹೊತ್ತು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದು ನಿಜ. ಆದರೆ ವಿಧಿಯ ಅಟ್ಟಹಾಸ ಇಷ್ಟಕ್ಕೆ ಮುಗಿಯಲಿಲ್ಲ. ಮಗಳು ಅಂಗವಿಕಲಳಾಗಿದ್ದು ಮಾತೂ ಬರಲ್ಲ, ಕಿವಿಯೂ ಕೇಳಿಸಲ್ಲ. ಅಷ್ಟೇ ಏಕೆ ಸ್ವತಂತ್ರವಾಗಿ ಓಡಾಡಲು ಸಾಧ್ಯವಿಲ್ಲ. ಆಕೆಗೆ ಈಗ 20 ವರ್ಷ ಪ್ರಾಯ. ಶಿಕ್ಷಣ ಪಡೆದುಕೊಂಡು ತಾಯಿಗೆ ಆಶ್ರಯ ನೀಡಬೇಕಿದ್ದ, ಇಲ್ಲವೇ ಮದುವೆಯಾಗಿ ಇನ್ನೊಂದು ಕುಟುಂಬದ ಬೆಳಕಾಗಬೇಕಿದ್ದ ಮಗಳು ಕಳೆದ ಎರಡು ದಶಕದಿಂದಲೂ ಹಾಸಿಗೆ ಮೇಲೆಯೇ ಬದುಕು ಸಾಗಿಸಿದ್ದಾಳೆ. ಇಂದೋ ನಾಳೆಯೋ ಮಗಳು ಸುಧಾರಿಸಿ ಎಲ್ಲರಂತಾಗಬಹುದು ಎಂಬ ಹೆತ್ತ ತಾಯಿಯ ಕನಸು ಕಮರಿಹೋಗಿದೆ. ಆದರೂ ಕೂಲಿ ಮಾಡಿ ಸಿಗುವ ಅಷ್ಟೋ ಇಷ್ಟೋ ಸಂಪಾದನೆಯಲ್ಲಿ ಮಗಳ ಲಾಲನೆ, ಪಾಲನೆಯನ್ನು ಆ ತಾಯಿ ಮಾಡುತ್ತಲೇ ಇದ್ದಾಳೆ. ನೋವಿನ ಸಂಗತಿ ಎಂದರೆ ಮಗಳು ಸಂಪೂರ್ಣ ಅಂಗವಿಕಲಳಾದರೆ ಜವಾಬ್ದಾರಿ ಹೊತ್ತ ತಾಯಿಗೂ ಕಿವಿ ಸರಿಯಾಗಿ ಕೇಳಲ್ಲ.
ಈ ಗ್ರಾಮದಲ್ಲಿ ಇಷ್ಟು ವರ್ಷ ಬದುಕು ಕಟ್ಟಿಕೊಂಡರು ಕೂಡ ಈ ಕುಟುಂಬ ಪಡಿತರ ವ್ಯವಸ್ಥೆಯಿಂದ ದೂರ ಉಳಿದಿದೆ. ಮಗಳ ಆಧಾರ ಗುರುತಿನ ಚೀಟಿ ಕೂಡ ಇಲ್ಲದಿರುವುದು ಇನ್ನಷ್ಟು ಸಮಸೆಯಾಗಿದೆ. ಈ ನಡುವೆ ಅಂಗವಿಕಲ ವೇತನ ಬರುತ್ತಿರುವುದು ಮಾತ್ರ ಕುಟುಂಬಕ್ಕೆ ಕೊಂಚ ಆಸರೆಯಾಗಿದೆ.
ಪಡಿತರ ಚೀಟಿ ಹೊಂದಿರದ ಕಾರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯಿಂದ ಶಶಿಕಲಾ ಕುಟುಂಬ ದೂರ ಉಳಿಯುವಂತಾಗಿದೆ. ಯಾರೋ ಹೇಳಿದ್ದನ್ನು ಅರ್ಥ ಮಾಡಿಕೊಂಡಾರೇ ಹೊರತು ತಾನೇ ಮುಂದೆ ಹೋಗಿ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳವಷ್ಟು ಅರಿವು ಕೂಡ ಇಲ್ಲ. ಹೀಗಾಗಿ ಪ್ರತಿದಿನ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ.
ಸರ್ಕಾರದ ಯಾವುದೇ ಯೋಜನೆ ಇರಲಿ ಅದು ದುರ್ಬಲರ, ಅಸಹಾಯಕರ ಮಾತ್ರವಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಕ್ಕಾಗ ಮಾತ್ರ ಯೋಜನೆ ಸಾರ್ಥಕವಾಗುತ್ತದೆ. ಈ ಕೆಲಸ ಸರ್ಕಾರದಿಂದ ಆಗಬೇಕಿದೆ. ಬಡ, ಅಂಗವಿಕಲ ಶಶಿಕಲಾ ಕುಟುಂಬದ ಬದುಕನ್ನು ಸರ್ಕಾರವೇ ಮುಂದೆ ನಿಂತು ಕಟ್ಟಿಕೊಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net