

ಮಂಡ್ಯ: ಕಾವೇರಿ ಕಣಿವೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವರುಣನ ದರ್ಶನವಾಗದ ಪರಿಣಾಮ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ನೀರಿಲ್ಲದೆ ಬಣಗುಡುವಂತಾಗಿದೆ. ಮುಂಗಾರು ಪ್ರಾರಂಭವಾಗಿ ಜುಲೈ ಮುಗಿಯುತ್ತಾ ಬಂದರೂ 90 ಅಡಿಯಷ್ಟೇ ನೀರಿನ ಸಂಗ್ರಹವಿದೆ. ಗಮನಾರ್ಹ ವಿಷಯವೆಂದರೆ ಕಳೆದ ವರ್ಷ ಜು.20ರಂದು ಅಣೆಕಟ್ಟೆಗೆ ರಾಜ್ಯಸರ್ಕಾರದಿಂದ ಬಾಗೀನ ಅರ್ಪಿಸಲಾಗಿತ್ತು.
ಈ ವರ್ಷ ಪೂರ್ವ ಮುಂಗಾರಿನಿಂದಲೇ ಮಳೆ ಕೈಕೊಟ್ಟಿತ್ತು. ಆದರೂ ಜುಲೈನಲ್ಲಾದರೂ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಅದು ಕೂಡ ಹುಸಿಯಾಗುವ ಮುನ್ಸೂಚನೆ ಕಾಡುವಂತಾಗಿದೆ. ಮಂಡ್ಯ ಮಾತ್ರವಲ್ಲದೆ ಕಾವೇರಿ ಕಣಿವೆ ಜಿಲ್ಲೆಗಳಲ್ಲಿಯೇ ವರುಣನ ದರ್ಶನ ಸಿಕ್ಕಿಲ್ಲ. ಈ ತಿಂಗಳೊಳಗೆ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವುದು ನಿಶ್ಚಿತ ಎನ್ನುವ ಎಚ್ಚರಿಕೆಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
65 ಅಡಿಯೇ ಕೊನೆ: ಗರಿಷ್ಟ 124.80 ಅಡಿ ಸಂಗ್ರಹದ ಕೆಆರ್‌ಎಸ್ ಡ್ಯಾಂನಲ್ಲಿ ಜು.20ರಂದು 90.10 ಅಡಿಯಷ್ಟೇ ನೀರಿದೆ. ಡ್ಯಾಂಗೆ ಕೇವಲ 1,863 ಕ್ಯೂಸೆಕ್ ಒಳಹರಿವಿದೆ. ಸಧ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಕೇವಲ 25 ಅಡಿಯಷ್ಟೇ ಅಂದರೆ ಡ್ಯಾಂನ ಮಟ್ಟ 65 ಅಡಿ ಬರುವವರೆಗೆ ಮಾತ್ರ ಬಳಕೆ ಮಾಡಬಹುದು. ಉಳಿದಿರುವುದು ಡೆಡ್ ಸ್ಟೋರೆಜ್ ಮಾತ್ರ ಎನ್ನುವ ಪ್ರಮುಖ. ಇರುವ ನೀರಿನಲ್ಲಿಯೇ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗೆಂದು ಪ್ರತಿದಿನಕ್ಕೆ 200 ಕ್ಯೂಸೆಕ್ ನೀರನ್ನು ಕುಡಿಯಲು ಬಿಡಲಾಗುತ್ತಿದೆ. ಬೆಂಗಳೂರಿಗೆ ಸಧ್ಯ ಕಬಿನಿಯಿಂದ ನೀರು ಕೊಡಲಾಗುತ್ತಿದೆ. ಒಂದು ವೇಳೆ ಕಬಿನಿಯಲ್ಲಿ ನೀರಿನ ಪ್ರಮಾಣ ಕುಸಿತವಾದರೆ ಪರ್ಯಾಯ ವ್ಯವಸ್ಥೆಯಾಗಿ ಕೆಆರ್‌ಎಸ್ ಡ್ಯಾಂನಿಂದಲೇ ನೀರನ್ನು ಹರಿಸಬೇಕಾಗುತ್ತದೆ. 2022ರಲ್ಲಿ ವ್ಯಾಪಕ ಮಳೆಯಾಗಿದ್ದ ಹಿನ್ನೆಲೆಯಲ್ಲಿ ಡ್ಯಾಂ ಗರಿಷ್ಟಮಟ್ಟ ತಲುಪಿತ್ತು. ಮಾತ್ರವಲ್ಲದೆ 59.675 ಕ್ಯೂಸೆಕ್ ಒಳಹರಿವು ಹಾಗೂ 57.557 ಕ್ಯೂಸೆಕ್ ಹೊರಹರಿವಿತ್ತು.
ಈ ಬಾರಿ ಜಿಲ್ಲೆಗೆ ಮಳೆ ಕೈಕೊಟ್ಟಿದೆ ಎನ್ನುವುದು ಮಳೆಯ ಪ್ರಮಾಣವೇ ಸಾಕ್ಷಿಕರಿಸುತ್ತಿದೆ. ಜು.1ರಿಂದ ಜು.20ರವರೆಗೆ ಜಿಲ್ಲೆಯಲ್ಲಿ 90.9 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ 65.8 ಮಿ.ಮೀ ವಾಸ್ತವ ಮಳೆಯಾಗಿದ್ದು, 27.6 ಮಿ.ಮೀ ಕೊರತೆ ಕಾಡುತ್ತಿದೆ. ಅಂತೆಯೇ ಜು.1ರಿಂದ 20ರವರೆಗೆ 34.4 ಮಿ.ಮೀ ವಾಡಿಕೆ ಮಳೆಗೆ 20.4 ಮಿ.ಮೀ ವಾಸ್ತವ ಮಳೆಯಾಗಿದೆ. ಜು.14ರಿಂದ 20ರವರೆಗೆ 14.6 ಮಿ.ಮೀ ವಾಡಿಕೆ ಮಳೆಗೆ 3.2 ಮಿ.ಮೀ ವಾಸ್ತವ ಮಳೆಯಾಗಿದೆ. ಇದು ಆತಂಕವನ್ನು ಹೆಚ್ಚಿಸಿದೆ.
ಬೀದಿಗಿಳಿದಿರುವ ರೈತರು: ಮಳೆಯಾಗದ ಕಾರಣ ಜಮೀನಿನಲ್ಲಿ ಸಾವಿರಾರೂ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆ ಒಣಗಲಾರಂಭಿಸಿದೆ. ಪ್ರಸ್ತುತ 49,495 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕಟಾವು ಹಂತದಲ್ಲಿದ್ದು, ಈಗಾಗಲೇ ಇಳುವಾರಿ ಕುಂಠಿತವಾಗುತಿದೆ. ಈ ಹಿನ್ನೆಲೆಯಲ್ಲಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲೆಯ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಕಳೆದ ವರ್ಷ ಜು.20ಕ್ಕೆ ಜಿಲ್ಲೆಯಲ್ಲಿ ಏಕದಳ ಬೆಳೆಯ ಬಿತ್ತನೆ 2,881 ಹೆಕ್ಟೇರ್‌ನಲ್ಲಿ ಆಗಿತ್ತು. ಈ ವರ್ಷ ಕೇವಲ 894 ಹೆಕ್ಟೇರ್ ಆಗಿದೆ. ಅಂತೆಯೇ 11,855 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯದ ಬಿತ್ತನೆಯಾಗಿತ್ತು. ಈ ಬಾರಿ 10,211 ಹೆಕ್ಟೇರ್ ಆಗಿದೆ.