

ಕಲಘಟಗಿ: ಜೂನ್ ತಿಂಗಳು ಆರಂಭವಾಗಿ ಹತ್ತು ದಿನ ಕಳೆದರೂ ಮುಂಗಾರು ಮಳೆ ಆರಂಭವಾಗದಿರುವುದು ತಾಲೂಕಿನ ರೈತಾಪಿ ವರ್ಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜೂನ್ ಅಂದರೆ ರೈತರ ಮೊಗದಲ್ಲಿ ಮಂದಹಾಸ ಬೀರುವ ಮೊದಲ ಮಾಸವಾಗಿತ್ತು. ಆದರೆ, ಮಳೆರಾಯನ ದರ್ಶನವಾಗದಿರುವುದು ರೈತರ ಕೃಷಿ ಕಾರ್ಯ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.
ಪ್ರತಿವರ್ಷ ರೋಹಿಣಿ ಮತ್ತು ಮೃಗಶಿರಾ ಅವಧಿಯಲ್ಲಿ ಸುರಿಯುವ ಮಳೆಯಿಂದಲೇ ರೈತರು ಬಿತ್ತನೆ ಕಾರ್ಯ ಮುಗಿಸುತ್ತಿದ್ದರು. ಆದರೆ, ಈ ಬಾರಿ ರೋಹಿಣಿ ಹಾಗೂ ಮೃಗಶಿರ ರೈತನ ಮೇಲೆ ಮುನಿಸಿಕೊಂಡAತಿದೆ. ಇಷ್ಟೊತ್ತಿಗಾಗಲೇ ಹೊಲ ಸಿದ್ಧಗೊಳಿಸಿ ಬಿತ್ತನೆ ಕಾರ್ಯ ಮುಗಿಯುತ್ತಿತ್ತು.
ಆದರೆ, ಮಳೆರಾಯನ ಮುನಿಸಿನಿಂದ ತಾಲೂಕಿನಲ್ಲಿ ಕೇವಲ ಶೇ. ೨೦ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದೆ.
ಈ ಬಾರಿ ಮೇ ತಿಂಗಳ ಕೊನೆಯ ವಾರಾಂತ್ಯದಲ್ಲಿ ಆಗಬೇಕಿದ್ದ ರೋಹಿಣಿ ಮಳೆ ಸ್ವಲ್ಪ ತಡವಾಗಿ ಬಂದಿದ್ದರಿAದ ಕೆಲವೆಡೆ ಬಿತ್ತನೆ ಕಾರ್ಯವೂ ಮಂದಗತಿಯಲ್ಲಿ ಸಾಗಿತು. ಇನ್ನೇನು ಮಳೆಯಾಯಿತು, ಭೂಮಿ ಹದ ಮಾಡಿಕೊಂಡು ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದರಾಯಿತು ಎಂದುಕೊAಡಿದ್ದ ರೈತರು ಇದೀಗ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ.
ಕ್ಷೇತ್ರದಲ್ಲಿನ ಬಿತ್ತನೆ ಗುರಿ ಭೂಮಿ: ಮೇ ತಿಂಗಳ ಕೊನೆಯ ವಾರದಲ್ಲಿ ೪೦,೭೬೩ ಹೆಕ್ಟೇರ್ ಕೃಷಿ ಭೂಮಿಯ ಬಿತ್ತನೆ ಗುರಿಯನ್ನು ಹೊಂದಲಾಗಿತ್ತು. ಆದರೆ, ಮುಂಗಾರು ಮಳೆ ವಿಳಂಬವಾದ್ದರಿAದ ಕೇವಲ ೭,೩೫೯ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ. ಇನ್ನೂ ೩೩,೪೦೪ ಹೆಕ್ಟೇರ್ ಕೃಷಿ ಭೂಮಿ ಬಿತ್ತನೆ ಆಗಬೇಕಿದೆ.
ಪ್ರತಿವರ್ಷ ಅಲ್ಪ ಸ್ವಲ್ಪ ಮಳೆಯಾಗಿ ಕೊಳೆವೆ ಬಾವಿಯಲ್ಲಿ ನೀರು ಸದಾ ಹರಿಯುತ್ತಿದ್ದವು. ಆದರೆ, ಈ ಬಾರಿ ವರ್ಷವಿಡೀ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೊಳೆವೆ ಬಾವಿಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ೮೪ ಮಿ.ಮೀ. ನಷ್ಟು ಮಳೆ ಆಗಿದ್ದು. ಇನ್ನೂ ಶೇ. ೩೬ರಷ್ಟು ಮಳೆ ಆಗಬೇಕಿದೆ. ಆದ್ದರಿಂದ ಸಮರ್ಪಕ ಮಳೆಯಾಗುವವರೆಗೂ ರೈತರು ಬಿತ್ತನೆ ಮಾಡಬಾರದು. ಈಗಾಗಲೇ ಬಿತ್ತನೆ ಮಾಡಿದ ತಾಲೂಕಿನ ರೈತರು ಕೊಳವೆ ಬಾವಿಗಳಿಂದ ಭೂಮಿಗೆ ನೀರುಣಿಸಿ ಬತ್ತಿದ ಬೀಜಗಳನ್ನ ಹುಟ್ಟಿಸಿಕೊಳ್ಳಲು ಮುಂದಾಗಬೇಕಿದೆ. | ಎನ್.ಎಫ್. ಕಟ್ಟೇಗೌಡ್ರ, ಸಹಾಯಕ ಕೃಷಿ ನಿರ್ದೇಶಕ
ಕಳೆದ ವಾರ ಬಿತ್ತನೆಗೆ ಬೇಕಾದಷ್ಟು ಮಳೆಯಾಗಿದ್ದರಿಂದ ಸಾಲ ಮಾಡಿ ಬೀಜ, ಗೊಬ್ಬರಗಳನ್ನು ಖರದೀಸಿ ಬಿತ್ತನೆ ಮಾಡಿದ್ದೆವು. ಬಿತ್ತನೆ ಮಾಡಿ ವಾರ ಕಳೆದರೂ ಇನ್ನೂ ಮಳೆಯಾಗಿಲ್ಲ. ಇದರಿಂದ ಭೂಮಿಯಲ್ಲಿ ಬಿದ್ದ ಕಾಳುಗಳು ಮೊಳಕೆ ಒಡೆದು ಅಲ್ಲಿಯೇ ಒಣಗಿ ಹೋಗುತ್ತಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.| ಶಿವಪ್ಪ ಹೆಬ್ಬಳ್ಳಿ, ರೈತ