ಬಾರದ ಮಳೆ, ಒಣಗುತ್ತಿವೆ ಅಲಸಂದೆ, ಹೆಸರು, ಎಳ್ಳು, ಮೆಕ್ಕೆಜೋಳ ಬೆಳೆ

Yalaburga Rain Shortage Crop Damage
ಯಲಬುರ್ಗಾ ತಾಲೂಕಿನ ಹುಲೇಗುಡ್ಡ ಹತ್ತಿರದ ಜಮೀನಲ್ಲಿ ಬಿತ್ತನೆಯಾದ ಅಲಸಂದೆ ಬೆಳೆ ಮಳೆಯಿಲ್ಲದೆ ಬಾಡುತ್ತಿರುವುದು.
Published on

ಯಲಬುರ್ಗಾ: ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಕೆಲವೆಡೆ ಸುರಿದಿದ್ದ ಅಲ್ಪ ಸ್ವಲ್ಪ ಮಳೆಗೆ ಬಿತ್ತನೆಯಾದ ಬೆಳೆಗಳು ಬಾಡುತ್ತಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ತಾಲೂಕಿನ ನಾನಾ ಭಾಗದ ಹಳ್ಳಿಗಳ ರೈತರು ಅಲಸಂದೆ, ಮೆಕ್ಕೆಜೋಳ, ಸಜ್ಜೆ, ಎಳ್ಳು ಬಿತ್ತನೆ ಮಾಡಿದ್ದು, ಬಳಿಕ ಮಳೆಯಾಗದೆ ಬೆಳೆಗಳು ಬಾಡಲಾರಂಭಿಸಿವೆ.

ಮುರಡಿ, ಗೆದಗೇರಿ, ಹುಲೇಗುಡ್ಡ, ಮಂಡಲಮರಿ, ಉಚ್ಚಲಕುಂಟಾ, ತರಲಕಟ್ಟಿ, ತುಮ್ಮರಗುದ್ದಿ, ಹಗೇದಾಳ, ಬೂನಕೊಪ್ಪ ಮತ್ತಿತರೆಡೆ ಅಲಸಂದೆ ಬಿತ್ತನೆಯಾಗಿದೆ. ಇದಕ್ಕೂ ಕೆಲ ದಿನಗಳ ಹಿಂದೆ ಮುರಡಿ, ಹುಲೇಗುಡ್ಡ, ಮಂಡಲಮರಿ, ಗೆದಗೇರಿ ಭಾಗದಲ್ಲಿ ಸಜ್ಜೆ, ಮೆಕ್ಕೆಜೋಳ ಬಿತ್ತನೆಯಾಗಿದ್ದು ತೇವಾಂಶ ಕೊರತೆಯಿಂದ ಎಲ್ಲ ಬೆಳೆಗಳು ಒಣಗಲಾರಂಭಿಸಿವೆ.

ಎಲ್ಲೆಲ್ಲಿ ಏನೇನು ಬಿತ್ತನೆ

ಯಲಬುರ್ಗಾ ಹೋಬಳಿಯಲ್ಲಿ ಮೆಕ್ಕೆಜೋಳ 500 ಹೆಕ್ಟೇರ್, ಸಜ್ಜೆ 150 ಹೆಕ್ಟೇರ್, ತೊಗರಿ 30 ಹೆಕ್ಟೇರ್, ಹೆಸರು 120 ಹೆಕ್ಟೇರ್, ಅಲಸಂದೆ 180 ಹೆಕ್ಟೇರ್, ಎಳ್ಳು 10 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಿರೇವಂಕಲಕುಂಟಾ ಹೋಬಳಿಯಲ್ಲಿ ಮೆಕ್ಕೆಜೋಳ 750 ಹೆಕ್ಟೇರ್, ಸಜ್ಜೆ 70 ಹೆಕ್ಟೇರ್, ತೊಗರಿ 10 ಹೆಕ್ಟೇರ್, ಅಲಸಂದೆ 30 ಹೆಕ್ಟೇರ್ ಹಾಗೂ ಎಳ್ಳು 60 ಹೆಕ್ಟೇರ್‌ನಲ್ಲಿ ಬಿತ್ತನೆಗೊಂಡಿದೆ.

ಆಗಸದತ್ತ ಮುಖ ಮಾಡಿದ ರೈತ

ಸರಿಯಾದ ವೇಳೆಗೆ ಮುಂಗಾರು ಮಳೆಯಾಗಿದ್ದರೆ ಬಿತ್ತನೆಗೊಂಡ ಬೆಳೆಗಳು ಸಮೃದ್ಧವಾಗಿ ಬೆಳೆದು ನಳನಳಿಸುತ್ತಿದ್ದವು. ಇದೂವರೆಗೂ ಮಳೆಯಾಗದ ಕಾರಣ ಬಹುತೇಕ ರೈತರು ಬಿತ್ತನೆ ಮಾಡಿಲ್ಲ. ಹೀಗೆಯೇ ಮಳೆ ಕೈಕೊಟ್ಟರೆ ಜೀವನ ನಿರ್ವಹಣೆ, ಜಾನುವಾರು ಪಾಲನೆ ಹೇಗೆ ಎನ್ನುವ ಚಿಂತೆ ಅನ್ನದಾತರನ್ನು ಕಾಡತೊಡಗಿದೆ.

ಇದುವರೆಗೂ ಮುಂಗಾರು ಮಳೆಯಾಗದ ಕಾರಣ ಬಿತ್ತನೆಯಾಗಿಲ್ಲ. ಕೆಲ ಕಡೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಬಿತ್ತನೆಯಾಗಿದೆ. ರೈತರು ಸಂಪೂರ್ಣ ಮಳೆಯಾದ ಬಳಿಕ ತೇವಾಂಶ ನೋಡಿಕೊಂಡು ಬಿತ್ತನೆ ಕೈಗೊಳ್ಳಬೇಕು.| ಪ್ರಾಣೇಶ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ ಮುಂಗಾರು ಮಳೆ ಸಕಾಲದಲ್ಲಿ ಸಂಪೂರ್ಣ ಸುರಿದಿದ್ದರೆ, ಬಿತ್ತನೆಯಾದ ನಾನಾ ಬೆಳೆಗಳು ಈಗಾಗಲೇ ಇಪ್ಪತ್ತು ದಿನದ ಪೈರಾಗುತ್ತಿದ್ದವು. ಹೀಗೆಯೇ ಮಳೆ ಹೋದರೆ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತೆ.| ಹನುಮಂತಪ್ಪ, ಹಿರೇವಂಕಲಕುಂಟಾ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net