

ಚಿಕ್ಕಮಗಳೂರು: ಆಡಳಿತ ಪಕ್ಷದ ಸದಸ್ಯರೇ ತಮ್ಮ ವಿರುದ್ಧ ಜಿಪಂ ಸಭೆಯಲ್ಲಿ ಧಿಕ್ಕಾರ ಕೂಗಿ ಅವಮಾನ ಮಾಡಿದ್ದಾರೆ. ಏನು ಬೇಕಾದರೂ ಆಗಲಿ, ಇಷ್ಟೆಲ್ಲ ಆದ ಮೇಲೆ ಇನ್ನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸುಜಾತ ಕೃಷ್ಣಪ್ಪ ಖಡಾಖಂಡಿತವಾಗಿ ಹೇಳಿದರು.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭೆ ಉತ್ತಮವಾಗಿ ನಡೆದಿದ್ದರೆ ರಾಜೀನಾಮೆ ನೀಡುವ ಉದ್ದೇಶ ತಮ್ಮಲ್ಲಿತ್ತು. ಆದರೆ ಸಭೆಯಲ್ಲಿ ಅಗೌರವ ತೋರಿದ್ದರಿಂದ ಇಡೀ ದಲಿತ ಸಮುದಾಯಕ್ಕೆ ಅವಮಾನ ಆದಂತಾಗಿದೆ. ಮುಂದೆ ಬರುವವರಿಗೆ ಈ ರೀತಿ ಆಗಬಾರದು. ತಾವು ಆರ್ಥಿಕವಾಗಿ ಗಟ್ಟಿ ಇಲ್ಲದಿದ್ದರೂ ಹೋರಾಟದ ಮೂಲಕ ಅದನ್ನೆಲ್ಲ ಎದುರಿಸುವ ಶಕ್ತಿ ಇದೆ. ಪಕ್ಷವೇ ಈ ಸ್ವಾಭಿಮಾನವನ್ನು ಕಲಿಸಿದೆ ಎಂದರು.
ಪಕ್ಷದ ಪಾತ್ರವಿಲ್ಲ
ತಾವು ರಾಜೀನಾಮೆ ನೀಡಬೇಕೆಂಬ ವಿಚಾರದಲ್ಲಿ ಇಡೀ ಪಕ್ಷದ್ದೇನೂ ಪಾತ್ರವಿಲ್ಲ. ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ತಮ್ಮ ಕ್ಷೇತ್ರದ ಒಬ್ಬರು ಜಿಪಂ ಸದಸ್ಯರು, ಮತ್ತೊಬ್ಬರು ವಿಧಾನಸಭಾ ಕ್ಷೇತ್ರದ ಮುಖಂಡರು ಇದಕ್ಕೆಲ್ಲ ಕಾರಣ. ವಿಧಾನಸಭಾ ಕ್ಷೇತ್ರದ ಆ ಮುಖಂಡರು ನನ್ನ ಗುರುಗಳೂ ಹೌದು ಎಂದರು. ಈ ಸಂದರ್ಭ ಮಾಧ್ಯಮದವರು ಆ ಇಬ್ಬರು ಸದಸ್ಯರು ರಾಮಸ್ವಾಮಿ ಮತ್ತು ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರೇ ಎಂದು ಕೇಳಿದಾಗ ಅಧ್ಯಕ್ಷರು, ಅದನ್ನು ಬಾಯಿಬಿಟ್ಟು ಹೇಳಲಾರೆ ಎಂದರು.
ಉದ್ದೇಶ ಈಡೇರಿದೆ
ಹಿಂದೆ ಇದೇ ಸದಸ್ಯರು ಅಧ್ಯಕ್ಷರ ವಿವೇಚನೆಯ ಶಾಸನಬದ್ಧ ಅನುದಾನ ಬಳಕೆಗೆ ಸಮ್ಮತಿಸಿದ್ದರು. ಈಗ ಅವರೇ ಬೇಡ ಎನ್ನುತ್ತಿದ್ದಾರೆ. ಪ್ರತಿ ಜಿಪಂ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕೆಂದು ಹೇಳಿದ್ದಾರೆ. ಅದಕ್ಕೆ ತಾವು ಒಪ್ಪಿಗೆ ನೀಡಿದ್ದು, ಕೊನೆಗೂ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕೆಂಬ ತಮ್ಮ ಉದ್ದೇಶ ಈಡೇರಿದೆ ಎಂದು ತಿಳಿಸಿದರು.