ಬಿಎಸ್‌ವೈ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ: ಆಯನೂರು

ayanur manjunath
ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ
Published on

ಶಿವಮೊಗ್ಗ: ನಾನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕ್ಷಮೆ ಕೋರುವ ಪ್ರಮೇಯವೇ ಇಲ್ಲ. ನಾನು ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ನಾನು ಮಾಡಿರುವ ಆರೋಪಗಳನ್ನು ಬಿಜೆಪಿಯವರು ತಪ್ಪಾಗಿ ಬಿಂಭಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅಭಿಪ್ರಾಯಪಟ್ಟರು.

ನಾನು ಯಡಿಯೂರಪ್ಪ ಅವರ ಕ್ಷಮೆ ಕೋರಬೇಕೆಂದು ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಒತ್ತಾಯಿಸಿದ್ದಾರೆ. ಅವರಿಗೆ ನಾನು ಮಾಡಿರುವ ಆರೋಪಗಳು ಅರ್ಥವಾದಂತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಲೂ ಯಡಿಯೂರಪ್ಪನವರ ಬಗ್ಗೆ ನನಗೆ ಗೌರವವಿದೆ. ನನ್ನ ಬೆಳೆವಣಿಗೆಯಲ್ಲಿ ಅವರ ಪಾತ್ರವಿದೆ. ಆದರೆ ಆ ಬೆಳವಣಿಗೆಯ ಬೇರು ಮಾತ್ರ ನಾನೇ. ಅದಕ್ಕೆ ಅವರು ನೀರು, ಗೊಬ್ಬರ ಹಾಕಿದ್ದಾರೆ ಅಷ್ಟೇ. ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದೇನೆ. ಕಾರ್ಮಿಕರು ಸೇರಿದಂತೆ ಹಲವು ಹೋರಾಟಗಳಲ್ಲಿ ಲಾಟಿ ಏಟು ತಿಂದಿದ್ದೇನೆ ಎಂದರು.
ಕಳೆದ 10 ವರ್ಷಗಳಿಂದ ಎಂದೂ ಯಡಿಯೂರಪ್ಪನವರ ಪರವಾಗಿ ಮಾತನಾಡದೇ ಇದ್ದ ಹರತಾಳು ಹಾಲಪ್ಪನವರು ಈಗ ಮಾತನಾಡಿದ್ದು ನನಗೆ ಸಂತೋಷ ತಂದಿದೆ ಎಂದು ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು. ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ನವರು ಯಡಿಯೂರಪ್ಪ ಪರವಾಗಿ ಮಾತನಾಡಿದ್ದಾಗ ಈ ಜಿಲ್ಲೆಯ ಯಾವ ಬಿಜೆಪಿ ಶಾಸಕರೂ ಬಾಯಿ ಬಿಡಲಿಲ್ಲ ಎಂದು ಹೇಳಿದರು.
ಆ ಸಂದರ್ಭದಲ್ಲಿ ಯಡಿಯೂರಪ್ಪ ಪರವಾಗಿ ಧ್ವನಿ ಎತ್ತಿದ್ದು ನಾನು ಹಾಗೂ ಹೊನ್ನಾಳಿ ಶಾಸಕರಾಗಿದ್ದ ರೇಣುಕಾಚಾರ್ಯ ಮಾತ್ರ. ಈಗ ಮೊದಲ ಬಾರಿ ಹರತಾಳು ಹಾಲಪ್ಪ ಯಡಿಯೂರಪ್ಪ ಪರವಾಗಿ ಮಾತನಾಡುವ ಔದಾರ್ಯ ತೋರಿದ್ದಾರೆ. ಆದರೆ ನನ್ನ ಆರೋಪಗಳಿಗೆ ಅವರು ಉತ್ತರ ನೀಡಿಲ್ಲ ಎಂದರು.
ನಾನೊಬ್ಬ ಸಾಮಾನ್ಯ ಮನುಷ್ಯ. ನಾನು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಬಿಎಸ್‌ವೈ ಡಿಸಿಎಂ ಹಾಗೂ ಸಿಎಂ ಆಗಿದ್ದ ಸಂದರ್ಭದಲ್ಲಿ ನಾನು ಯಾವುದೇ ತಪ್ಪು, ಭ್ರಷ್ಟಾಚಾರ ಮಾಡಿಲ್ಲ. ಹೀಗಾಗಿ ಅವರ ಬಳಿ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕ ಹನುಮಂತು, ಪ್ರಮುಖರಾದ ಎಸ್.ಟಿ. ಹಾಲಪ್ಪ, ವೈ.ಎಚ್.ನಾಗರಾಜ್, ಧೀರರಾಜ್ ಹೊನ್ನವಿಲೆ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net