ಸಿದ್ದರಾಮಯ್ಯ ಅವರಲ್ಲಿ ಪರಿಶುದ್ಧತೆ, ಪ್ರಾಮಾಣಿಕತೆ ಇಲ್ಲ: ಎಚ್‌ಡಿಕೆ

HDK Siddu
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಅವರಲ್ಲಿ ಪರಿಶುದ್ಧತೆ, ಪ್ರಾಮಾಣಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾನೂನು ಬಾಹಿರ ಚಟುವಟಿಕೆ ಮಾಡಿ ಅದರಿಂದ ರಕ್ಷಣೆ ಪಡೆಯುವುದರಲ್ಲಿ ಡಿ.ಕೆ. ಶಿವಕುಮಾರ್ ಎಕ್ಸ್‌ಪರ್ಟ್ ಇದ್ದಾರೆ, ಅವರು ಇದರಲ್ಲಿ ಅನುಭವಸ್ಥರು ಎಂದರು.

ಅವರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದಿದ್ದರೆ ಈ ತೀರ್ಮಾನ ಮಾಡುತ್ತಿರಲಿಲ್ಲ. ದೇಶದ ಸಂವಿಧಾನದ ಸಂಸ್ಥೆಗಳನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಸಹ ದಾರಿ ತಪ್ಪಿದ್ದು, ಕಾನೂನು ತಜ್ಞರ ಅಭಿಪ್ರಾಯ ಸಹ ಇದೆ ಆಗಿದೆ. ಇವರ ನಡವಳಿಕೆಗಳಲ್ಲಿ ಪರಿಶುದ್ಧತೆ, ಪ್ರಾಮಾಣಿಕತೆ ಇದ್ದಿದ್ದರೆ ತನಿಖೆಗೆ ಒಪ್ಪಬೇಕಿತ್ತು. ಆದರೆ ಅದು ಅವರಲ್ಲಿ ಇಲ್ಲ. ತನಿಖೆಗೆ ಕಾನೂನು ಸಮ್ಮತವಾಗಿಯೇ ನೀಡಲಾಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಸಹ ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಡಿಸಿಎಂ ಕಾಲಡಿ ಸಿಎಂ:

ಮುಖ್ಯಮಂತ್ರಿಗಳು ಒಬ್ಬ ವಕೀಲರಾಗಿ, ಕಾನೂನು ಉಪನ್ಯಾಸಕರಾಗಿ ಅವರಿಂದ ಈ ತೀರ್ಮಾನ ಬಂದಿರುವುದರಿಂದ ನಿಲುವು ಬಯಲಾಗಿದೆ. ಕಾನೂನುಬಾಹಿರ ಚಟುವಟಿಕೆಗೆ ರಕ್ಷಣೆ ಕೊಡಲು ಈ ತೀರ್ಮಾನ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿರ್ಧಾರದ ಮೂಲಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಕಾಲಿನ ಕೆಳಗೆ ಇದ್ದೇವೆ ಎಂಬುದನ್ನು ಪ್ರದರ್ಶಿಸಿದ್ದಾರೆ ಎಂದು ಲೇವಡಿ ಮಾಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ಸರ್ಕಾರ ವಾಪಾಸ್ ಪಡೆದಿರುವುದನ್ನು ಖಂಡಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನ್ಯಾಯಾಲಯದ ಮೊರೆ ಹೋಗುವ ಮೂಲಕ ಸರ್ಕಾರ ದಾರಿ ತಪ್ಪಿ ತೆಗೆದುಕೊಂಡ ನಿರ್ಣಯವನ್ನು ಪ್ರಶ್ನಿಸಿದ್ದಾರೆ. ಯತ್ನಾಳ್ ಅವರು ನ್ಯಾಯಾಲಯದ ಮೊರೆ ಹೋಗಿರುವುದಕ್ಕೆ ಬೆಂಬಲವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net