ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರಿಗಿಲ್ಲ ಪ್ರವೇಶ

CAN_1327
Published on

ಮೈಸೂರು: ಕರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮೈಸೂರು ಮಹಾನಗರ ಪಾಲಿಕೆ ಕಚೇರಿ, ಮೈಸೂರು ವಿವಿಯ ಕಾರ್ಯಸೌಧವಾದ ಕ್ರಾಫರ್ಡ್ ಭವನ, ನಗರ ಸಂಚಾರ ಎಸಿಪಿ ಕಚೇರಿ ಹಾಗೂ ದಕ್ಷಿಣ ವಲಯ ಐಜಿಪಿ ಅವರ ನಿವಾಸದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೂ ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ನಿಯೋಜಿಸಿದ್ದು, ಅಲ್ಲಿಯೇ ಇರುವ ಅಹವಾಲು ಸ್ವೀಕೃತಿ ಕೌಂಟರ್‌ನಲ್ಲಿ ಎಲ್ಲ ರೀತಿಯ ಅರ್ಜಿ ಸ್ವೀಕರಿಸಲಾಗುತ್ತಿದೆ. ಸ್ಯಾನಿಟೈಸರ್ ಹಾಕಿದ ಬಳಿಕ ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತಿದೆ. ತುರ್ತು ಹಾಗೂ ಗಂಭೀರ ವಿಷಯ ಹೊರತುಪಡಿಸಿ ಯಾರನ್ನೂ ಕಚೇರಿಗೆ ಹೋಗಲು ಅವಕಾಶ ನೀಡುತ್ತಿಲ್ಲ.

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ 50 ವರ್ಷ ಮೇಲ್ಪಟ್ಟ ಸರ್ಕಾರಿ ಸಿಬ್ಬಂದಿಗೆ ಮನೆಯಲ್ಲೇ ಇರಲು ಸೂಚಿಸಲಾಗಿದೆ. ಹೀಗಾಗಿ, ಹಾಜರಾತಿಯೂ ಕಡಿಮೆಯಾಗಿದೆ. ಸಾರ್ವಜನಿಕರ ಭೇಟಿ ಹಾಗೂ ಕೆಲಸಗಳು ನಡೆಯುತ್ತಿಲ್ಲ. ಕರೊನಾ ಭೀತಿಯಿಂದ ಎಚ್ಚೆತ್ತುಕೊಂಡಿರುವ ಸಾರ್ವಜನಿಕರು ಅನಗತ್ಯವಾಗಿ ಇತ್ತ ಬರುತ್ತಿಲ್ಲ.

ಅಂತೆಯೆ, ಮುಡಾ, ತಹಸೀಲ್ದಾರ್ ಕಚೇರಿ, ಕಾಡಾ, ಪಾಲಿಕೆ ವಲಯ ಕಚೇರಿಗಳು, ಸೆಸ್ಕ್ ಕಚೇರಿ, ಕಾವೇರಿ ನೀರಾವರಿ ನಿಗಮ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಐಎಡಿಬಿ, ನಗರ ಪೊಲೀಸ್ ಆಯುಕ್ತರ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲೂ ಇದೇ ಸ್ಥಿತಿ ಇದೆ.

ಕೆಲ ಗಂಭೀರ ದೂರುಗಳನ್ನು ಹೊರತುಪಡಿಸಿ ಉಳಿದಂತೆ ಸಾಮಾನ್ಯ ಸಮಸ್ಯೆ ಹೊತ್ತು ಬರುವ ಸಾರ್ವಜನಿಕರಿಗೆ ಪೊಲೀಸ್ ಠಾಣೆಯೊಳಗೆ ಬಿಡುತ್ತಿಲ್ಲ. ನಗರದಲ್ಲಿ ರಿಸೆಪ್ಷನ್ ಕೌಂಟರ್ ಮತ್ತು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಹೀಗಾಗಿ ಅಲ್ಲಿಯೇ ದೂರು ಮತ್ತು ಅರ್ಜಿ ಸ್ವೀಕರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net