

ಮೈಸೂರು: ಬರಗಾಲ ಸಂದರ್ಭದಲ್ಲಿ ಸಾಲ ವಸೂಲಿಗಾಗಿ ರೈತರ ಮೇಲೆ ಒತ್ತಡ ಮತ್ತು ಬಲವಂತ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಯೋಜನೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾದ್ಯಂತ ಬರ ವ್ಯಾಪ್ತಿಸಿದೆ. ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲ ವಸೂಲಾತಿಗಾಗಿ ರೈತರಿಗೆ ನೋಟಿಸ್ ಕೊಡುವಂತಿಲ್ಲ. ಅವರಿಗೆ ಮಾನಸಿಕ ಕಿರುಕುಳ ನೀಡಿದರೆ ಬ್ಯಾಂಕ್‌ಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಸಾಲ ವಸೂಲಿಯಲ್ಲಿ ಮಾನವೀಯತೆಯಿಂದ ವರ್ತಿಸಬೇಕು. ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತಿಲ್ಲ. ಸಾಲ ಕಟ್ಟಲು ರೈತರಿಗೆ ಇನ್ನಷ್ಟು ಸಮಯಾವಕಾಶ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ತಾಳ್ಮೆ ಮತ್ತು ಸಹನೆಯಿಂದ ವರ್ತನೆ ಮಾಡಬೇಕು ಎಂದು ತಾಕೀತು ಮಾಡಿದರು.
ಇಂತಹ ಸಂದರ್ಭದಲ್ಲೂ ಕೃಷಿ ಸಾಲವನ್ನು ಒಂದೇ ಕಂತಿನಲ್ಲಿ ಪಾವತಿ ಮಾಡಲು ಕೆಲ ರೈತರು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಕಾಳಜಿಯಿಂದ ವರ್ತಿಸಿ, ಉತ್ತೇಜನ ನೀಡಬೇಕು. ಆದರೆ, ಈ ವಿಷಯದಲ್ಲಿ ಬ್ಯಾಂಕ್ ನಿಯಮಾವಳಿಗಳನ್ನು ಮುಚ್ಚಿಕೊಂಡು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಲಾಗುತ್ತಿದೆ. ಇದು ಸಮಂಜಸವಲ್ಲ. ಒಂದೇ ಕಂತಿನಲ್ಲಿ ಸಾಲಪಾವತಿಯಿಂದ ಬ್ಯಾಂಕ್‌ಗಳಿಗೂ ಅನುಕೂಲವಾಗಲಿದೆ. ಆದ್ದರಿಂದ ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸರ್ಕಾರದ ವಿವಿಧ ಯೋಜನೆಯಡಿ ಸಾಲ, ವಿವಿಧ ಸೌಲಭ್ಯ ಕಲ್ಪಿಸಿಕೊಡಲು ಬ್ಯಾಂಕ್‌ಗಳು ನೆರವಾಗಬೇಕು. ಈ ವಿಷಯದಲ್ಲಿ ವಿಳಂಬ ಮಾಡಬಾರದು. ಫಲಾನುಭವಿಗಳಿಗೆ ಸತಾಯಿಸಬಾರದು ಎಂದು ನಿರ್ದೇಶನ ನೀಡಿದರು.
ಠೇವಣಿ ಸಂಗ್ರಹಿಸುವುದು ಬ್ಯಾಂಕ್‌ಗಳ ಕೆಲಸವಷ್ಟೇ ಅಲ್ಲ, ಕೆಲ ಸಾಮಾಜಿಕ ಕಲ್ಯಾಣ ಕಾರ್ಯಕ್ಕೂ ನೆರವು ನೀಡಬೇಕು. ಸಾಲ ವಿತರಣೆ ಪ್ರಕ್ರಿಯೆಯನ್ನು ಸರಳೀಕರಣ ಮಾಡಿ ಕೃಷಿ ಸಾಲ, ಸ್ವಯಂ ಉದ್ಯೋಗ ಸಾಲ ಸೇರಿದಂತೆ ಇನ್ನಿತರ ಸಾಲ ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಬೇಕು. ಇದರಿಂದ ಅವರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ಕೊಂಚ ಉದಾರ ನಿಲುವು ಅನುಸರಿಸಬೇಕು ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಜಿಲ್ಲೆಯಲ್ಲಿರುವ ಬ್ಯಾಂಕ್‌ಗಳ ಠೇವಣಿ ಮೊತ್ತ ಶೇ.9.77ರಷ್ಟು ಹೆಚ್ಚಳವಾಗಿದೆ. 46,243 ಕೋಟಿ ರೂ.ನಿಂದ 51,252 ಕೋಟಿ ರೂ.ಗೆ ಏರಿಕೆಯಾಗಿದೆ. ಸಾಲ ವಿತರಣೆಯಲ್ಲೂ ಶೇ. 12.13ರಷ್ಟು ಏರಿಕೆಯಾಗಿದೆ. ಕೃಷಿಗೆ 18,808 ಕೋಟಿ ರೂ, ದುರ್ಬಲ ವರ್ಗದವರಿಗೆ 11,532 ಕೋಟಿ ರೂ., ಮಹಿಳೆಯರಿಗೆ 12,147 ಕೋಟಿ ರೂ., ಆದ್ಯತಾ ವಲಯಕ್ಕೆ 28,540 ಕೋಟಿ ರೂ. ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ.ಎನ್.ನಾಗೇಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಎಸ್‌ಬಿಐ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜೇಶ್‌ಕುಮಾರ್ ಚೌಧರಿ, ಆರ್‌ಬಿಐ ಎಫ್‌ಐಡಿಡಿ ಬೆಂಗಳೂರಿನ ವ್ಯವಸ್ಥಾಪಕ ವಾಸಂತಿ ಸಾಗರ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಶಾಂತವೀರ ಇತರರು ಇದ್ದರು.
ಪಿಎಂ ಸ್ವನಿಧಿ ಯೋಜನೆಯಡಿ ಪಾಲಿಕೆ ಅನುಮೋದಿತ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ವಿರುದ್ಧ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕ್‌ನಲ್ಲಿ ವಿವಿಧ ಸರ್ಕಾರಿ ಖಾತೆಗಳನ್ನು ಸ್ಥಗಿತಗೊಳಿಸಿ, ಅಲ್ಲಿಯ ಹಣವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆಯಿಂದ ಅನುಮೋದಿತರಿಗೆ ಸಾಲ ಕೊಡಲು ಏನು ಸಮಸ್ಯೆ? ಇದರಲ್ಲಿ ಏನು ತಾಂತ್ರಿಕ ತೊಂದರೆ ಇದೆ? ಈಗಾಗಲೇ 10 ಸಾವಿರ ರೂ. ಸಾಲ ನೀಡಲಾಗಿದೆ. ಉಳಿಕೆ 20 ಸಾವಿರ ರೂ. ಕೊಡಲು ಆಗುವುದಿಲ್ಲ ಎಂದರೆ ಏನು ಅರ್ಥ? ಇದು ನಿಜಕ್ಕೂ ನಿರ್ಲಕ್ಷೃವೇ ಸರಿ ಎಂದು ಕಿಡಿಕಾರಿದರು.
ಇದಕ್ಕೆ ಧ್ವನಿಗೂಡಿಸಿದ ಸಂಸದ ಪ್ರತಾಪ್ ಸಿಂಹ, ನಗರದಲ್ಲಿರುವ ಈ ಬ್ಯಾಂಕ್‌ಗಳಿಗೆ ಪಾಲಿಕೆಯಿಂದ ನೀಡುವ ನೀರಿನ ಸಂಪರ್ಕ ಕಡಿತ ಮಾಡಿ. ಕಸ ವಿಲೇವಾರಿ ಮಾಡಬೇಡಿ. ಅವರ ಕಚೇರಿ ಮುಂದೆ ಕಸ ತಂದು ಹಾಕಿ. ಆಗ ಗೊತ್ತಾಗುತ್ತದೆ. ಅವರಿಗೆ ಜನರ ಕಷ್ಟ ಎಂದು ಅಸಮಾಧಾನ ಹೊರಹಾಕಿದರು.