ಇಲ್ಲಿಲ್ಲ ಮುನ್ನೆಚ್ಚರಿಕೆ ಕ್ರಮ, ಹೆಚ್ಚಾಯ್ತು ಆತಂಕ

24 RON 1
Published on

ವಿಜಯವಾಣಿ ಸುದ್ದಿಜಾಲ ರೋಣ

ರೋಣ ತಾಲೂಕಿನಲ್ಲಿ ನಾಲ್ಕು ಕರೊನಾ ಪ್ರಕರಣಗಳು ಬೆಳಕಿಗೆ ಬಂದರೂ ಜನತೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ವಿವಿಧ ಕೆಲಸಕ್ಕಾಗಿ ಬುಧವಾರ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ಜನ ಪರಸ್ಪರ ಅಂತರ ಕಾಯ್ದುಕೊಳ್ಳದೇ ವ್ಯವಹರಿಸುತ್ತಿರುವುದು ಕಂಡುಬಂತು.

ಮಂಗಳವಾರ ರೋಣ ಪಟ್ಟಣದ ಕಲ್ಯಾಣ ನಗರದ ನಿವಾಸಿ ಹಾಗೂ ಇಟಗಿ ಗ್ರಾಮದ ಮೂವರಿಗೆ ಕರೊನಾ ದೃಢಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆದರೆ, ಉಪ ನೋಂದಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಕರೊನಾ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ತಮ್ಮ ಕಚೇರಿ ಹಾಗೂ ಸಮಾಜ ಕಲ್ಯಾಣ, ಭೂ ದಾಖಲೆ ಸೇರಿ ಅನೇಕ ಕಚೇರಿಗಳಿರುವ ಮಿನಿ ವಿಧಾನಸೌಧ ಕಟ್ಟಡದ ಮುಖ್ಯ ದ್ವಾರಕ್ಕೆ ಬೀಗ ಜಡಿದು ಕರೊನಾ ಸೋಂಕು ಹರಡದಂತೆ ಕ್ರಮ ಜರುಗಿಸಿದ್ದಾರೆ. ಆದರೆ, ಇದೇ ಕಚೇರಿಯ ಕೂಗಳತೆಯ ದೂರದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಬುಧವಾರ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಬಂದಿದ್ದ ಸಾರ್ವಜನಿಕರು ಶಿಸ್ತು ಕಾಪಾಡದಿರುವುದು ಇಲ್ಲಿನ ನೌಕರರಿಗೆ ಹಾಗೂ ಪಟ್ಟಣದ ಸಾರ್ವಜನಿಕರಿಗೆ ಆತಂಕ ಮೂಡಿಸಿದೆ.

ಪ್ರಕರಣ ಹೆಚ್ಚುವ ಸಾಧ್ಯತೆ: ಇಲ್ಲಿನ ಉಪ ನೋಂದಣಿ ಕಾರ್ಯಾಲಯದ ಸಿಬ್ಬಂದಿ ಕೇವಲ ತಮ್ಮ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ ವಿನಃ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಯಾನಿಟೈಸರ್ ಬಳಕೆ ಮಾಡುತ್ತಿಲ್ಲ. ಪರಸ್ಪರ ಅಂತರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಧೋರಣೆ ಮುಂದುವರಿದರೆ ಕರೊನಾ ಪ್ರಕರಣಗಳು ಹೆಚ್ಚಾಗುವುದ ರಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜನಜಂಗುಳಿ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ವಿವಿಧ ಕೆಲಸಕ್ಕಾಗಿ ಕಚೇರಿಗೆ ಬರುವ ಸಾರ್ವಜನಿಕರು ಪರಸ್ಪರ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಕರೊನಾ ಸೋಂಕು ತಡೆಗೆ ಸ್ಯಾನಿಟೈಸರ್ ಸೇರಿ ಅಗತ್ಯ ಕ್ರಮ ಕೈಗೊಂಡು ಶಿಸ್ತು ಕಾಪಾಡುವಂತೆ ನೋಂದಣಾಧಿಕಾರಿಗೆ ಸೂಚಿಸುತ್ತೇನೆ. | ಜೆ.ಬಿ. ಜಕ್ಕನಗೌಡರ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net