

ಶಿವಮೊಗ್ಗ: ಬಿಜೆಪಿ ಸಂಸ್ಥಾಪಕರು ಕಂಡಿದ್ದ ದಶಕಗಳ ಕನಸು ಇಂದು ಒಂದೊಂದಾಗಿ ಸಾಕಾರಗೊಳ್ಳುತ್ತಿವೆ. ಹಿಂದಿನವರು ಮಾಡಿದ್ದ ಹೋರಾಟದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಯಾವುದೇ ಅಧಿಕಾರ ಶಾಶ್ವತವಲ್ಲ, ಆದರೆ ಪಕ್ಷದ ಕಾರ್ಯಕರ್ತನೆಂಬ ಹೆಗ್ಗಳಿಕೆಯನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗೆಂದು ಜಿಲ್ಲಾ ಬಿಜೆಪಿಯಿಂದ ಸೋಮವಾರ ಏರ್ಪಡಿಸಿದ್ದ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ದೇಶದಲ್ಲಿ ಎರಡು ಸ್ಥಾನ ಸಿಕ್ಕ ಸಂದರ್ಭದಲ್ಲೂ ನಮ್ಮ ನಾಯಕರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ, ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ರದ್ದತಿ ಬಗ್ಗೆ ನಿರ್ಣಯಿಸಿದ್ದರು. ಅವೆರಡೂ ಇಂದು ಕೈಗೂಡಿವೆ ಎಂದರು.
500 ವರ್ಷಗಳ ರಾಮಮಂದಿರ ನಿರ್ಮಾಣದ ಕನಸು ಈಡೇರಿದೆ. ನಾಯಕರ ಸಂಕಲ್ಪವೂ ಪೂರ್ಣಗೊಂಡಂತಾಗಿದೆ. ಪಕ್ಷದ ಕಾರ್ಯಕರ್ತರಾದ ನಾವು ಪೂರ್ಣ ಮನಸ್ಸಿನಿಂದ ಕೆಲಸ ಮಾಡಬೇಕು. ಆಗ ಮಾತ್ರ ಎಲ್ಲವೂ ಕೈಗೂಡತ್ತದೆ. ಪಕ್ಷ ಮತ್ತಷ್ಟು ಬಲಗೊಳ್ಳುತ್ತದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ 400ಕ್ಕೂ ಹೆಚ್ಚು ಸ್ಥಾನ ಗಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಆಶಯ ಈಡೇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕಾಂಗ್ರೆಸ್‌ನವರು ಈಗ ಯಾವ ಮುಖವಿಟ್ಟುಕೊಂಡು ಶೋಷಿತರ ಸಮಾವೇಶ ಮಾಡುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ ಅಂಬೇಡ್ಕರ್‌ಗೆ ಸೇರಿದ ಐದು ಸ್ಥಳಗಳನ್ನು ಅಭಿವೃದ್ಧಿ ಮಾಡಿದ್ದು ನರೇಂದ್ರ ಮೋದಿ ಎಂಬ ವಾಸ್ತವವನ್ನು ನಾವು ಎಲ್ಲರಿಗೂ ತಿಳಿಸಬೇಕಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಕಾರ್ಯದರ್ಶಿ ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಭಾರಿ ರಘುಪತಿ ಭಟ್, ಕ್ಷೇತ್ರದ ಸಂಚಾಲಕ ಗಿರೀಶ್ ಪಟೇಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ರಾಜು ತಲ್ಲೂರು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.