

ನೆಲಮಂಗಲ: ಬಡಜನರ ಊಟದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ತಾಲೂಕಿನ ಹಂಚಿಪುರದಲ್ಲಿ 200 ಬಡ ಕುಟುಂಬಗಳಿಗೆ ಮುಖಂಡ ಭೈರೇಗೌಡ, ಅನ್ನದಾನಯ್ಯ ಕುಟುಂಬದವರು ಸಿದ್ಧಪಡಿಸಿದ್ದ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬಡವರು, ಕೂಲಿಕಾರ್ಮಿಕರು, ನಿರಾಶ್ರಿತರು, ಪಡಿತರ ಚೀಟಿ ಇಲ್ಲದಿರುವ ಮಂದಿಗೆ ಸಹಾಯಹಸ್ತ ಚಾಚುವಂತೆ ಪಕ್ಷದ ಹಿರಿಯ ವರಿಷ್ಠರ ಕರೆಗೆ ಸ್ಪಂದಿಸಿರುವ ಮುಖಂಡರು, ಚುನಾಯಿತ ಪ್ರತಿನಿಧಿಗಳು ಅಗತ್ಯ ಸಾಮಗ್ರಿ ವಿತರಣೆಗೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.
ದಾಸೋಹ ಆರಂಭಿಸಿ: ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಿದ್ದ ಎಸ್.ಆರ್.ವಿಶ್ವನಾಥ್, ಮಠದ ಶ್ರೀಗಳು, ದಾನಿಗಳು ಹಾಗೂ ಸ್ವಯಂಸೇವಕರ ಜತೆ ಚರ್ಚಿಸಿ, ದಾಸೋಹ ವ್ಯವಸ್ಥೆ ಆರಂಭಿಸುವಂತೆ ಮನವಿ ಮಾಡಿದರು. ಬಸವಣ್ಣ ದೇವರ ಮಠದಲ್ಲಿ 18 ದಿನಗಳಿಂದ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಠದಲ್ಲಿ ನಡೆಯುತ್ತಿದ್ದ ದಾಸೋಹ ವ್ಯವಸ್ಥೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಶಾಸಕ ಶ್ರೀನಿವಾಸಮೂರ್ತಿ ವಿಡಿಯೋ ವೈರಲ್ ಆಗಿದ್ದು, ಏ.14ಕ್ಕೆ ಮಠದಲ್ಲಿ ನಡೆಯುತ್ತಿದ್ದ ದಾಸೋಹ ವ್ಯವಸ್ಥೆ ಸ್ಥಗಿತಗೊಂಡಿತ್ತು.
ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ, ಶಿರಸ್ತೇದಾರ್ ಮಂಜುನಾಥ್, ಬಿಇಒ ಕೆ.ಸಿ.ರಮೇಶ್, ಅಕ್ಷರದಾಸೋಹ ಅಧಿಕಾರಿ ಶಿವಕುಮಾರ್, ಪುರಸಭೆ ಸದಸ್ಯರಾದ ಎನ್.ಎಸ್.ಪೂರ್ಣಿಮಾ, ಸಿ.ಪ್ರದೀಪ್, ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಸದಸ್ಯ ರಮೇಶ್, ಮುಖಂಡ ಬೈರೇಗೌಡ, ಗ್ರಾಪಂ ಸದಸ್ಯ ಅನ್ನದಾನಪ್ಪ, ಮಾಜಿ ಅಧ್ಯಕ್ಷೆ ಗೀತಾ ಮತ್ತಿತರರು ಉಪಸ್ಥಿತರಿದ್ದರು.
ಈಜಾಡಿದ ಬಗ್ಗೆ ಸಚಿವ ಸುಧಾಕರ್ ಟ್ವಿಟ್ ಮಾಡಿರುವುದರಿಂದ ಕೆಲವರಿಗೆ ಅಸಮಾಧಾನವಿರಬಹುದು. ಸರ್ಕಾರ, ಜನಪ್ರತಿನಿಧಿಗಳ ಪ್ರತಿನಡೆ ವಿರೋಧಿಸುವುದೇ ಪ್ರತಿ ಪಕ್ಷದ ಕೆಲಸವಾಗಬಾರದು. ಲೋಪಗಳನ್ನೆ ಮುಂದಿಟ್ಟುಕೊಂಡು ಪ್ರಚಾರ ಪಡೆಯುವುದು ಸರಿಯಲ್ಲ. ಟೀಕೆ ಮಾಡುತ್ತಿರುವ ನಾಯಕರು ರಾತ್ರಿಯಾದ ಕೂಡಲೇ ಸಿಗದಿರುವ ವಸ್ತುಗಳನ್ನು ತರಿಸಿಕೊಂಡು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ, ಕಾರ್ಯಕರ್ತರು ಕೊಟ್ಟ ಆಹಾರ ಪದಾರ್ಥಗಳನ್ನು ಕೊಟ್ಟು ಫೋಟೋ ತೆಗೆಸಿಕೊಳ್ಳುವುದಲ್ಲ ಎಂದು ವಿಶ್ವನಾಥ್ ಕಿಡಿಕಾಡಿದರು.
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೀಡಿರುವ ಕೊಡುಗೆಯಾದರೂ ಏನು?, ಕರೊನಾ ವೈರಸ್‌ಮುಕ್ತವಾದ ಬಳಿಕ ಬೇಕಾದಲ್ಲಿ ಟೀಕೆಟಿಪ್ಪಣಿ ಮಾಡಿಕೊಳ್ಳಲಿ, ಅಲ್ಲಿವರೆಗೆ ದೇಶದ ಜನರೆಲ್ಲಾ ಒಂದೇ ಎಂದು ತಿಳಿಸಿದರು.