

ಗುಂಡ್ಲುಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಅಹೋರಾತ್ರಿ ಹೋರಾಟ ನಾಲ್ಕು ದಿನ ಪೂರೈಸಿದ ಬೆನ್ನಲ್ಲೇ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುವ ಮೂಲಕ ಅಧಿಕಾರಿಗಳು ಹಾಗೂ ಶಾಸಕರಿಗೆ ಚಾಟಿ ಬೀಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷೃದಿಂದ ತಾಲೂಕಿನ ಕೆರೆಗಳಿಗೆ ಸಕಾಲದಲ್ಲಿ ನದಿ ಮೂಲದಿಂದ ನೀರು ತುಂಬಿಸದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರ ಹಿಂದೆ ದೊಡ್ಡ ಹುನ್ನಾರವಿದೆ. ಕ್ಷೇತ್ರದಲ್ಲಿ ಶಾಸಕರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಕೆರೆಗಳಿಗೆ ನೀರು ತುಂಬಿಸಲು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತಂದ ಯೋಜನೆ ನಿರುಪಯುಕ್ತವಾಗುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದರಿಂದ ರೈತರು ತೊಂದರೆ ಎದುರಿಸುವಂತಾಗಿದೆ. ಕಳೆದ ವರ್ಷ ಹೀಗೆಯೇ ರೈತರು ಪ್ರತಿಭಟನೆ ನಡೆಸಿದಾಗ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬಂದು ಮುಂದಿನ ವರ್ಷ ಅಕ್ಟೋಬರ್‌ನಿಂದ ನೀರು ಬಿಡುವುದಾಗಿ ಲಿಖಿತ ಭರವಸೆ ನೀಡಿದ್ದರೂ ಈ ಬಾರಿ ತಾಂತ್ರಿಕ ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿ ವರ್ಷ ಜೂನ್‌ನಿಂದ ಜನವರಿವರೆಗೆ ಕೆರೆಗಳಿಗೆ ನೀರು ಹರಿಸಬೇಕಾಗಿದ್ದು, ಅಕ್ಟೋಬರ್‌ನಲ್ಲಿಯೂ ಮೋಟಾರು ಸ್ಟಾರ್ಟ್ ಮಾಡಿಲ್ಲ. ಹೀಗಿರುವಾಗ ಡಿಸೆಂಬರ್ ವೇಳೆಗೆ ನೀರು ಬಿಡುವುದಾಗಿ ಹೇಳುತ್ತಿದ್ದು, ನಿಮ್ಮನ್ನು ಯಾವ ಗ್ಯಾರಂಟಿ ಮೇಲೆ ನಂಬಲು ಆಗುತ್ತದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬದ್ಧತೆ ಮರೆತಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಚಾಟಿ ಬೀಸಿದರು.
ನಾನು ಶಾಸಕನಾಗಿದ್ದಾಗ ಹೋರಾಟ ನಡೆಸಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗಿತ್ತು. ಹೋರಾಟದ ಫಲವಾಗಿ ಸತತವಾಗಿ ನೀರು ಹರಿಸಿದ್ದರಿಂದಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ರೈತರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಕಳೆದ ಎರಡು ವರ್ಷದಿಂದ ನೀರು ಬಿಡದೆ ಎಲ್ಲ ಕೆರೆಗಳೂ ಬತ್ತಿಹೋಗಿದ್ದು ಮತ್ತೆ ಅಂತರ್ಜಲ ಮತ್ತೆ ಪಾತಾಳಕ್ಕಿಳಿಯುತ್ತಿದ್ದರೂ ಶಾಸಕರು ಸುಮ್ಮನಿದ್ದಾರೆ. ಸರ್ಕಾರಕ್ಕೆ ವಿದ್ಯುತ್ ಬಿಲ್ ಉಳಿಸುವ ಸಲುವಾಗಿ ನೀರು ಹರಿಸುವುದನ್ನು ತಾಂತ್ರಿಕ ದೋಷದ ನೆಪದಲ್ಲಿ ಮುಂದೂಡಲಾಗುತ್ತಿದೆ. ಅಲ್ಲದೆ ಅರಣ್ಯಾಧಿಕಾರಿಗಳು ವಿನಾಕಾರಣ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪವಿದ್ದು ಕೂಡಲೇ ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ, ತಾಲೂಕು ಅಧ್ಯಕ್ಷ ದಿಲೀಪ್, ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಶಿವಕುಮಾರ್ ಸೇರಿದಂತೆ ಹಲವರು ಇದ್ದರು.