ಮಹದಾಯಿ ವಿಷಯದಲ್ಲಿ ರಾಜಕೀಯ ಬೇಡ

New Munenakoppa New
Published on

ಹುಬ್ಬಳ್ಳಿ : ಕಳಸಾ-ಬಂಡೂರಿ ವಿಷಯವಾಗಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕವಾದದ್ದು. ಕಾನೂನಿನ ಪ್ರಕಾರ ಮಹದಾಯಿ ನೀರು ಪಡೆಯುವವರೆಗೂ ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಂಕರ ಪಾಟೀಲ ಮುನೇನಕೊಪ್ಪ, ಮಹದಾಯಿ ನ್ಯಾಯಮಂಡಳಿ 14-8-2018ರಲ್ಲಿಯೇ ನೀರಿನ ಹಂಚಿಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಬೇಡಿಕೆಯಿದ್ದ 7.56 ಟಿಎಂಸಿ ಬದಲಾಗಿ 4 ಟಿಎಂಸಿ ನೀರನ್ನು ಕಣಿಯೇತರ ಬಳಕೆಗೆ ಮತ್ತು 8.02 ಟಿಎಂಸಿ ನೀರನ್ನು ವಿದ್ಯುಚ್ಛಕ್ತಿಗೆ ಸೇರಿ ಒಟ್ಟು 13.07 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರೊಂದಿಗೆ 1.5 ಟಿಎಂಸಿ ನೀರನ್ನು ಗೋವಾಗೆ ಮರಳಿಸುವ ಕರಾರು ಇದೆ ಎಂದು ಹೇಳಿದ್ದಾರೆ.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿನ ಕಾನೂನು ತೊಡಕು ನಿವಾರಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರು ಸಫಲರಾಗಲಿದ್ದಾರೆ. ಕಳಸಾ-ಬಂಡೂರಿ ನೀರು ತರುವ ಜವಾಬ್ದಾರಿ ಕರ್ನಾಟಕದ ಪ್ರತಿ ರಾಜಕಾರಣಿ ಮೇಲಿದೆ. ಹಾಗಾಗಿ, ಈ ವಿಷಯವನ್ನು ಅನಗತ್ಯ ರಾಜಕೀಯಗೊಳಿಸುವುದು ರೈತ ಕುಲಕ್ಕೆ ಸರಿಯಾದದ್ದು ಅಲ್ಲ ಎಂದಿದ್ದಾರೆ.

ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ವಿವಾದ ಶೀಘ್ರದಲ್ಲಿಯೇ ಕಾನೂನಿನ ಮೂಲಕ ಬಗೆಹರಿಯಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net