ಅಭಿವೃದ್ಧಿ ಕೆಲಸದಲ್ಲಿ ಬೇಡ ರಾಜಕೀಯ

BANAJIGA SANGHA
Published on

ರೋಣ: ಲಿಂಗಾಯತರು ಎಲ್ಲರೂ ಒಂದೇ ಎಂಬ ಸಂದೇಶವನ್ನು ಪ್ರದರ್ಶಿಸಬೇಕು. 1.70 ಕೋಟಿ ಇದ್ದ ಲಿಂಗಾಯತರ ಸಂಖ್ಯೆ ಇಂದು 45 ಲಕ್ಷಕ್ಕೆ ಇಳಿದಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಾಗಬೇಕು. ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ 31ನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಅಭಿವೃದ್ಧಿ ಕೆಲಸಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಚುನಾವಣೆ ಬಂದಾಗ ರಾಜಕೀಯ ಮಾಡಿ. ಆದರೆ, ವಿ.ಪ. ಸದಸ್ಯರು ಹಾಗೂ ಸಂಸದರು ಸಮುದಾಯ ಭವನ ನಿರ್ಮಾಣಕ್ಕಾಗಿ ಕೊಟ್ಟ ಅನುದಾನ ರಾಜಕೀಯ ಕಾರಣಗಳಿಗಾಗಿ ವಾಪಾಸ್ ಹೋಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿ, ಸಮುದಾಯ ಭವನಕ್ಕಾಗಿ ನಾನು ಕೂಡ 1 ಕೋಟಿ ರೂ. ನೀಡುವ ಭರವಸೆ ನೀಡಿದ್ದೆ. ಅದರಂತೆ ಈಗ 25 ಲಕ್ಷ ರೂ. ಬಿಡುಗಡೆ ಮಾಡಿದ್ದೇನೆ. ಆ ಹಣವನ್ನೂ ಈವರೆಗೂ ಉಪಯೋಗಿಸಿಕೊಂಡಿಲ್ಲ. ಆದು ಕೂಡ ಮೂರ್ನಾಲ್ಕು ತಿಂಗಳಲ್ಲಿ ವಾಪಾಸ್ ಹೋಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಸೂಚ್ಯವಾಗಿ ತಿಳಿಸಿದರು.

ಕರ್ನಾಟಕ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ಈಗ ನಡೆಯುತ್ತಿರುವ ಸಮೀಕ್ಷೆಯಲ್ಲಿ ಹಲವಾರು ಲೋಪಗಳಿವೆ. ಆದರೂ ಸಮಾಜ ಬಾಂಧವರು ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ಬಣಜಿಗ ಹಾಗೂ ಉಪಜಾತಿ ಕಾಲಂನಲ್ಲೂ ಬಣಜಿಗ ಎಂದು ಬರೆಯಿಸುವಂತೆ ತಿಳಿಸಿದರು.

ಸಹಕಾರ ಪತ್ತಿನ ಅಧ್ಯಕ್ಷ ಸೋಮಲಿಂಗಪ್ಪ ಚರೇದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ರೋಣ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುತ್ತಣ್ಣ ಸಂಗಳದ, ಅಂದಪ್ಪ ಜವಳಿ, ವೀರಣ್ಣ ಶೆಟ್ಟರ್, ಉಮೇಶಗೌಡ್ರ ಪಾಟೀಲ, ಈಶಣ್ಣ ಮುನವಳ್ಳಿ, ಸಂಗಪ್ಪ ಮೆಣಸಿನಕಾಯಿ, ರೂಪಾ ಅಂಗಡಿ, ಶಿವಯೋಗಿ ಜಕ್ಕಲಿ, ರವಿ ಸಂಗನಬಶೆಟ್ಟರ್, ವೈಭವ ಸಂಗನಬಶೆಟ್ಟರ್, ಗವಿಸಿದ್ದೇಶ ರೋಣದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net