

ಉಳ್ಳಾಲ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವು ಕಡೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೆ, ಗಡಿಭಾಗ ತಲಪಾಡಿಯಲ್ಲಿ ಆರ್‌ಟಿ-ಪಿಸಿಆರ್ ತಪಾಸಣಾ ಕೇಂದ್ರವೇ ಖಾಲಿಯಾಗಿದ್ದುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು.
ಲಾಕ್‌ಡೌನ್ ಸಂದರ್ಭ ಇಲ್ಲದ ಕಟ್ಟುನಿಟ್ಟಿನ ಕ್ರಮ ವಾರಾಂತ್ಯ ಕರ್ಫ್ಯೂ ವೇಳೆ ಜಾರಿಗೆ ತರಲಾಗಿದೆ. ಆದರೆ ಮೊದಲ ದಿನವಾದ ಶನಿವಾರ ಬೆಳಗ್ಗೆ ಕೊಣಾಜೆ ಠಾಣೆ ಮುಂಭಾಗ ಅಳವಡಿಸಲಾಗಿದ್ದ ಬ್ಯಾರಿಕೇಡ್‌ನಲ್ಲಿ ಪೊಲೀಸ್ ಕಾವಲು ಇಲ್ಲದ ಕಾರಣ ವಾಹನಗಳು ನಿರ್ಭೀತವಾಗಿ ಸಂಚರಿಸಿದವು. ದೇರಳಕಟ್ಟೆಯಲ್ಲಿ ಪೊಲೀಸ್ ತಪಾಸಣೆ ಇತ್ತಾದರೂ ಕೆಲವೊಂದು ವಾಹನಗಳು ಮಾತ್ರ ತಪಾಸಣೆಗೆ ಒಳಪಟ್ಟವು. ತೊಕ್ಕೊಟ್ಟು ಮೇಲ್ಸೇತುವೆ ಅಡಿಭಾಗದಲ್ಲಿ ಬೆಳಗ್ಗೆ ಹೆಚ್ಚಿನ ಪೊಲೀಸರು ತಪಾಸಣೆ ನಿರತರಾಗಿದ್ದರು. ಹಾಲು ಮಾರಾಟ ನೆಪದಲ್ಲಿ ಕೆಲವು ಅಂಗಡಿಗಳು ತೆರೆದಿರುವುದು ಕಂಡು ಬಂತು.
ಕೇರಳದಲ್ಲಿ ಪಾಸಿಟಿವಿಟಿ ದರ ಶೇ.10 ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವೇಶಕ್ಕೆ ನೆಗೆಟಿವ್ ಪ್ರಮಾಣಪತ್ರ ಅಗತ್ಯ. ಅಲ್ಲದೆ ಕೇರಳ-ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ಕರೊನಾ ಜೊತೆ ಡೆಲ್ಟಾ ಫಂಗಸ್ ತಪಾಸಣೆಯೂ ನಡೆಸಬೇಕು ಎಂದು ಕರ್ನಾಟಕ ಸರ್ಕಾರ ಮೊದಲೇ ಆದೇಶ ಹೊರಡಿಸಿದೆ. ಆದರೆ ಶನಿವಾರ ತಲಪಾಡಿಯಲ್ಲಿ ಅಂತಹ ತಪಾಸಣೆಯೇ ನಡೆದಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇಲ್ಲಿ ಆರ್‌ಟಿ-ಪಿಸಿಆರ್ ತಪಾಸಣಾ ಕೇಂದ್ರವನ್ನು ಹಿಂದೆಯೇ ತೆರೆಯಲಾಗಿದೆಯಾದರೂ, ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿಲ್ಲ, ಇದು ಗಡಿಭಾಗದ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.