ರಸ್ತೆಯಲ್ಲೇ ತರಕಾರಿ ವ್ಯಾಪಾರ ; ಚಿಂತಾಮಣಿ ಭಾನುವಾರದ ಸಂತೆಗೆ ಬೇಕಿದೆ ಸೂಕ್ತ ಸ್ಥಳ

23cmy1
Published on

ಚಿಂತಾಮಣಿ: ವಾರದ ಸಂತೆಗೆ ಸೂಕ್ತ ಜಾಗ ಗುರುತಿಸುವ ಬದಲು ಸ್ಥಳಾಂತರದಲ್ಲೇ ಸ್ಥಳೀಯ ಆಡಳಿತ ಕಾಲಹರಣ ಮಾಡುತ್ತಿರುವುದು ಸಂತೆ ವ್ಯಾಪಾರಸ್ಥರನ್ನು ಅತಂತ್ರರನ್ನಾಗಿಸಿದೆ. ವ್ಯಾಪಾರ ನಡೆಸಲು ಖಾಯಂ ಜಾಗವಿಲ್ಲದೆ ರಸ್ತೆಯಲ್ಲಿ ವ್ಯಾಪಾರ ನಡೆಸಬೇಕಿದ್ದು, ಬಿಸಿಲು, ಮಳೆಯಿದ್ದ ರಕ್ಷಣೆ ಪಡೆಯಲು ಟಾರ್ಪಲ್ ಹಾಕಿಕೊಂಡು ವಹಿವಾಟು ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೇಷ್ಮೆಗೂಡು ಮತ್ತು ಬಿತ್ತನೆ ಕೋಠಿ ವಾರುಕಟ್ಟೆಯ ಮುಂಭಾಗದ ಪ್ರದೇಶ, ಬಸ್ ನಿಲ್ದಾಣ ಜಾಗ ಹಾಗೂ ನಗರದ ಸರ್ಕಾರಿ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆಯುತ್ತಿದ್ದ ಮಾರುಕಟ್ಟೆ ಜಾಗದಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಾಭಿವೃದ್ಧಿ ಯೋಜನೆ (ಐಡಿಎಸ್‌ಎಂಟಿ)ಯಲ್ಲಿ ಅಂಗಡಿ ಮಳಿಗೆಗಳನ್ನು ನಿರ್ವಾಣ ಮಾಡಲಾಗಿದ್ದು ಕೆಲ ವ್ಯಾಪಾರಸ್ಥರಿಗೆ ಪುನರ್ವಸತಿ ಕಲ್ಪಿಸಲಾಗಿದೆ, ಆದರೆ ಭಾನುವಾರ ಸಂತೆ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಇದುವರೆಗೂ ಪುನರ್ವಸತಿ ಕಲ್ಪಿಸಲು ತಾಲೂಕು ಆಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸದ್ದರಿಂದ ಸಂತೆ ರಸ್ತೆಯಲ್ಲಿ ನಡೆಯುತ್ತಿದೆ.

ಬಸ್ ನಿಲ್ದಾಣದಿಂದ ಎತ್ತಂಗಡಿಯಾದ ವ್ಯಾಪಾರಸ್ಥರು ಕೆಲ ವರ್ಷಗಳ ಕಾಲ ರಝಾನ್ಸಿ ಮೈದಾನದಲ್ಲಿ ಸಂತೆ ನಡೆಸುತ್ತಿದ್ದರು. ಆದರೆ ಈ ಜಾಗದಲ್ಲೂ ವಿವಿಧ ಕಾಮಗಾರಿ ಕೈಗೊಂಡಿದ್ದರಿಂದ ಅಲ್ಲಿಂದ ಮತ್ತೆ ಅವರನ್ನು ಚೇಳೂರು ರಸ್ತೆಯ ರಾಮುಕುಂಟೆ ಪ್ರದೇಶದ ಖಾಲಿ ಸ್ಥಳಕ್ಕೆ ಎತ್ತಂಗಡಿ ಮಾಡಲಾಯಿತು, ಹೀಗಾಗಿ ವಾರದ ಸಂತೆ ರೇಷ್ಮೆಗೂಡು ಮತ್ತು ಬಿತ್ತನೆ ಕೋಠಿ ವಾರುಕಟ್ಟೆಯ ಮುಂಭಾಗದ ಪ್ರದೇಶ, ಬಸ್ ನಿಲ್ದಾಣದ ಜಾಗ ಹಾಗೂ ರಸ್ತೆಯಲ್ಲಿ ನಡೆಯುತ್ತಿದ್ದು, ಬಿಸಿಲು ಮಳೆಯಿಂದ ರಕ್ಷಣೆಗೆ ಪರದಾಡುವಂತಾಗಿದ್ದು ಮಳೆ ಬಂದರೆ ಧವಸಧಾನ್ಯ, ತರಕಾರಿ ನೀರಿನಲ್ಲಿ ನೆಂದು ನಷ್ಟ ಉಂಟಾಗುತ್ತಿದೆ

ಮತ್ತೆ ಎತ್ತಂಗಡಿ?: ರಾಮುಕುಂಟೆಯಲ್ಲಿ ಮುಂದಿನ ದಿನಗಳಲ್ಲಿ ಟ್ರಕ್ ಟರ್ಮಿನಲ್ ಮತ್ತು ಖಾಸಗಿ ಬಸ್ ನಿಲ್ದಾಣವನ್ನು ಇಲ್ಲಿಗೆ ಸ್ಥಳಾಂತರ ವಾಡಿದರೆ ಇದೇ ರಸ್ತೆಯಲ್ಲಿ ಈ ವಾಹನಗಳು ಸಂಚರಿಸುವುದರಿಂದ ಇಲ್ಲಯೂ ವ್ಯಾಪಾರ ನಡೆಸಲು ಸಾಧ್ಯವಾಗದೆ ಮತ್ತೆ ಗಂಟುಮೂಟೆ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಂತೆ ವ್ಯಾಪಾರಕ್ಕೆ ಸೂಕ್ತ ಸ್ಥಳವನ್ನು ನಿಗದಿಪಡಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ವ್ಯಾಪಾರಿಗಳು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಂತೆ ಮೈದಾನಕ್ಕೆ ಸೂಕ್ತ ಜಾಗದ ವ್ಯವಸ್ಥೆ ಮಾಡಬೇಕು ಎಂಬುದು ವ್ಯಾಪಾರಿಗಳ ಒತ್ತಾಯವಾಗಿದೆ.

ವಾರದ ಸಂತೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ, ಸಂತೆಗೆ ಸೂಕ್ತ ಸ್ಥಳ ನಿಗದಿಪಡಿಸದ ಕಾರಣ ತಾತ್ಕಾಲಿಕವಾಗಿ ರಾಮಕುಂಟೆ ಪ್ರದೇಶದ ಖಾಲಿ ಜಾಗದಲ್ಲಿ ವ್ಯಾಪಾರ ವಾಡುತ್ತಿದ್ದೇವೆ. ಇದು ತಗ್ಗು ಪ್ರದೇಶವಾಗಿರುವುದರಿಂದ ಮಳೆ ಬಂದರೆ ವ್ಯಾಪಾರ ವಾಡುವ ಸ್ಥಳಕ್ಕೆ ನೀರು ಹರಿದು ದವಸಧಾನ್ಯ, ತರಕಾರಿ ಮತ್ತು ಇತರ ವಸ್ತುಗಳು ನೆನೆದು ನಷ್ಟವಾಗುತ್ತಿದೆ. ಸರೋಜಮ್ಮ, ದವಸಧಾನ್ಯ ವ್ಯಾಪಾರಿ ಸೂಕ್ತ ಜಾಗ ಗುರುತಿಸುವುದು ಹಾಗೂ ಮೂಲಸೌಲಭ್ಯ ಕಲ್ಪಿಸುವಂತೆ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ, ಯಾವುದೇ ಪ್ರಯೋಜನವಾಗಿಲ್ಲ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತೆ ಇನ್ನೇಲ್ಲಿಗೂ ಸ್ಥಳಾಂದರಲ್ಲೇ ದಿನ ದೂಡುತ್ತಿದ್ದಾರೆ. ಸಿದ್ದಪ್ಪ, ತರಕಾರಿ ವ್ಯಾಪಾರಿ ರಾಮುಕುಂಟೆ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿಗಳನ್ನು ನಿರ್ವಾಣ ಮಾಡಿದ್ದು, ಅಲ್ಲಿಗೆ ವ್ಯಾಪಾರಸ್ಥರು ಬರಲು ಹಿಂದೇಟು ಹಾಕುತ್ತಿದ್ದಾರೆ. ಸಮಸ್ಯೆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ, ಆ ಸ್ಥಳವನ್ನು ಭಾನುವಾರ ಸಂತೆ ವ್ಯಾಪಾರಸ್ಥರಿಗೆ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಚೇತನ್‌ಕೊಳವಿ ನಗರಸಭೆ ಪೌರಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net