ಬಿಎಸ್‌ವೈ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಈಶ್ವರಪ್ಪ

ex dcm k.s.eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ ನನ್ನ ಪಕ್ಷ ಹಾಳಾಗಿ ಹೋಗುತ್ತಿರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಪಕ್ಷದ ಶುದ್ಧೀಕರಣಕ್ಕಾಗಿ ಲೋಕಸಭೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಜವಾಬ್ದಾರಿ ಇದೆ. ಬಿ.ವೈ.ರಾಘವೇಂದ್ರ ಅವರನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಿ. ಇನ್ನೊಬ್ಬ ಮಗ ಬಿ.ವೈ.ವಿಜಯೇಂದ್ರನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ನನ್ನ ಅಭ್ಯಂತರವಿಲ್ಲ. ಪಕ್ಷದ ನೀತಿ ನಿಯಮಗಳನ್ನು ಮೀರಿ ಒಂದೇ ಕುಟುಂಬ ಮುಂದೆ ಬಂದರೆ ಸಾಕಾ? ಹಿಂದುಳಿದ ಸಮಾಜವನ್ನು ಬೆಳೆಸುವ ಕೆಲಸ ಏಕೆ ಆಗುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನೆಡೆಯಾಗಲು ಇದೇ ಪ್ರಮುಖ ಕಾರಣ. ಅನಂತಕುಮಾರ್, ಬಿ.ಎಸ್.ಯಡಿಯೂರಪ್ಪ, ರಾಮಚಂದ್ರಗೌಡ, ವಿ.ಎಸ್.ಆಚಾರ್ಯ ಮತ್ತು ನನ್ನನ್ನೂ ಒಳಗೊಂಡಂತೆ ಹಿರಿಯ ನಾಯಕರು ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು. ಆದರೆ ಇಂದು ಆ ವ್ಯವಸ್ಥೆ ಪಕ್ಷದಲ್ಲಿಲ್ಲ. ಎಲ್ಲವನ್ನೂ ಒಂದೇ ಕುಟುಂಬ ನಿರ್ಧಾರ ತೆಗೆದುಕೊಳ್ಳುತ್ತಿದೆ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಬಾರಿ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಈ ಬಾರಿ 17 ಸ್ಥಾನಗಳಲ್ಲಿ ಗೆದ್ದಿದೆ. ಜೆಡಿಎಸ್ ಮೈತ್ರಿ ಇಲ್ಲದೇ ಇದ್ದಿದ್ದರೆ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳಬೇಕಿತ್ತು. ಇದನ್ನು ರಾಜ್ಯ ಮತ್ತು ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net