

ಬೆಂಗಳೂರು: ನಗರದ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಅಡಿಯಲ್ಲಿ ನಿರ್ಮಿಸಿರುವ ಸರ್ಕಾರಿ ಶಾಲೆಯ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದರೂ, ಉದ್ಘಾಟನೆಗೆ ಅವಕಾಶ ಸಿಕ್ಕಿಲ್ಲ. ಜತೆಗೆ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡದ ಕಾರಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿಯಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳು ಮುಗಿಯುತ್ತಾ ಬಂದರೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಇಲಾಖೆ ಮೀನಮೇಷ ಎಣಿಸುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಬೂಬು ಹೇಳುತ್ತಾ ಬಂದಿದ್ದು, ಹಳೇಯ ಕಟ್ಟಡದ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. ಸಣ್ಣ ಕೊಠಡಿಗಳಲ್ಲಿ ಮಕ್ಕಳು ಇಕ್ಕಟ್ಟಾದ ಜಾಗದಲ್ಲಿ ಕೂರಲು ಸ್ಥಳಾವಕಾಶ ಇಲ್ಲದೆ ಪಾಠ-ಪ್ರವಚನಗಳ ಆಲಿಕೆಗೆ ಭಾರೀ ತೊಂದರೆ ಎದುರಾಗಿದೆ.
ವಿದ್ಯಾರ್ಥಿಗಳ ಸಮಸ್ಯೆಯನ್ನು ಕಂಡಿರುವ ಸಿಆರ್‌ಸಿ, ಬಿಆರ್‌ಸಿ ಸಿಬ್ಬಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೂ ಪರಿಹಾರ ಒದಗಿಸಿಲ್ಲ. ಶಾಲಾ ಎಸ್‌ಡಿಎಂಸಿ ಕೂಡ ಬಿಇಒಗೆ ಹಲವು ಬಾರಿ ಮನವಿ ಮಾಡಿದ್ದರೂ, ಅಧಿಕಾರಿ ವರ್ಗ ಸ್ಪಂದಿಸುತ್ತಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೆಟ್ಟು ಬಿದ್ದಿದೆ. ವಿಶೇಷವೆಂದರೆ ಬಿಬಿಎಂಪಿಯ ಯಲಹಂಕ ವಲಯದ ಕೇಂದ್ರ ಕಚೇರಿ ಶಾಲೆ ಎದುರಲ್ಲೇ ಇದ್ದರೂ, ಪಾಲಿಕೆ ಅಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.
5 ಕೋಟಿ ರೂ. ವೆಚ್ಚದ ಯೋಜನೆ:
ಬ್ಯಾಟರಾಯನಪುರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಕಲಿಕೆಗೆ ಅವಕಾಶ ಇದೆ. ಹಳೆಯ ಕಟ್ಟಡ ಶಿಥಿಲವಾಗಿದ್ದರಿಂದ ವಿದ್ಯಾಶಿಲ್ಪ ಕಮ್ಯುನಿಟಿ ಟ್ರಸ್ಟ್ ತನ್ನ ಸಿಎಸ್‌ಆರ್ ನಿಧಿಯಡಿ 5 ಕೋಟಿ ರೂ. ವೆಚ್ಚ ಮಾಡಿ 2 ಅಂತಸ್ತಿನ ನೂತನ ಶಾಲಾ ಸಂಕೀರ್ಣವನ್ನು ನಿರ್ಮಿಸಿದೆ. 14 ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡದಲ್ಲಿ ಸಕಲ ಸೌಲಭ್ಯವೂ ಇದೆ. ಎಲ್ಲ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್‌ಗಳಾಗಿ ಪರಿವರ್ತಿಸಲು ಅವಕಾಶ ಇರುವಂತೆ ನಿರ್ಮಿಸಲಾಗಿದೆ. ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರಯೋಗಾಲಯ, ಕ್ರೀಡೆ, ಯೋಗ ಕಲಿಕೆಗೂ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. 2020ರಲ್ಲಿ ಆರಂಭವಾದ ಕಾಮಗಾರಿ ಈ ವರ್ಷದ ಆರಂಭದಲ್ಲೇ ಪೂರ್ಣಗೊಂಡಿದೆ. ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಇಲ್ಲಿನ ಕೊಠಡಿಗಳನ್ನು ಮತಗಟ್ಟೆ ಕೇಂದ್ರವನ್ನಾಗಿ ಮಾಡಲಾಗಿತ್ತು. ಆದರೆ, ಸಿಎಸ್‌ಆರ್ ನಿಯಮದಡಿ ಕೆಲ ದಾಖಲೆಗಳು ನೀಡಿಲ್ಲ ಎಂಬ ಸಬೂಬು ನೀಡಿ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲು ಇಲಾಖೆಗೆ ತಡೆ ಒಡ್ಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರೌಢಶಾಲೆ ಮಂಜೂರಾತಿಗೆ ಹಿಂದೇಟು?:
ಬ್ಯಾಟರಾಯನಪುರದ ಸರ್ಕಾರಿ ಶಾಲೆಗೆ 75 ವರ್ಷಗಳ ಇತಿಹಾಸ ಇದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರೂ ಶಾಲೆಯನ್ನು ಮೇಲ್ದರ್ಜೆಗೇರಿಸುವ ಯತ್ನ ಇದುವರೆಗೆ ನಡೆದಿರಲಿಲ್ಲ. ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಳ ಆಗಿದ್ದರೂ, ಬ್ಯಾಟರಾಯನಪುರಕ್ಕೆ ಪ್ರೌಢಶಾಲೆ ಮಂಜೂರಾತಿಯನ್ನೇ ನೀಡಿಲ್ಲ. ತಾಂತ್ರಿಕ ಕಾರಣವೊಡ್ಡಿ ನೆರೆಯ ಗ್ರಾಮಗಳಲ್ಲಿ ಹೈಸ್ಕೂಲ್ ಇರುವುದರಿಂದ ಮಂಜೂರಾತಿ ಸಿಗದು ಎಂದು ಅಧಿಕಾರಿಗಳು ವಾದ ಮುಂದಿಟ್ಟಿದ್ದಾರೆ. ಆದರೆ, ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಳವೆಂದು ಪರಿಗಣಿಸಿ ಪ್ರೌಢಶಾಲೆ ಮಂಜೂರು ಮಾಡುವಂತೆ 2 ದಶಕಗಳಿಂದ ಮನವಿ ನೀಡುತ್ತಾ ಬಂದಿದ್ದರೂ, ಇಲಾಖೆ ಈವರೆಗೂ ಸ್ಪಂದಿಸಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ಆಕ್ಷೇಪ ಹೊರಹಾಕಿದ್ದಾರೆ.
ಪದವಿ ಕಾಲೇಜು ಬಳಕೆಗೆ ಆದೇಶ:
ಬ್ಯಾಟರಾಯನಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ಬಳಸಿಕೊಳ್ಳಲು ಸಿದ್ಧತೆ ಆರಂಭಿಸಿರುವಾಗಲೇ ಜು.10ರಂದು ಕಾಲೇಜು ಶಿಕ್ಷಣ ಇಲಾಖೆಯು ನೂತನ ಕಟ್ಟಡವನ್ನು ಬಳಸಿಕೊಳ್ಳಲು ಬಿಇಒ, ಶಾಲಾ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದಿದೆ. ಇದನ್ನು ಕಂಡು ಹೌಹಾರಿರುವ ಎಸ್‌ಡಿಎಂಸಿಯವರು ಬಿಇಒ ಸಂಪರ್ಕಿಸಿದರೂ, ಬಿಇಒ ಸ್ಥಾನಕ್ಕೆ ಹೊಸಬರ ನೇಮಕ ಆಗಿದ್ದು ತನಗೇನು ಗೊತ್ತಿಲ್ಲ ಎಂದು ಸಬೂಬು ನೀಡಿದ್ದಾರೆ. ಅಚ್ಚರಿ ಎಂದರೆ ಕರಾವಳಿಯ ಕುಮುಟಾ ತಾಲೂಕಿನ ಬಾಡಾ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಂಗಳೂರಿನ ಬ್ಯಾಟರಾಯನಪುರಕ್ಕೆ ಸ್ಥಳಾಂತರಿಸಿ ಆದೇಶಿಸಲಾಗಿದೆ. ಸ್ಥಳಾಂತರಗೊಂಡ ಜಾಗದಲ್ಲಿ ಕಾಲೇಜು ಕಟ್ಟಡ ಇಲ್ಲದ ಕಾರಣ ಪ್ರಾಥಮಿಕ ಶಾಲೆಯ ಹೊಸ ಕಟ್ಟಡವನ್ನು ಬಲವಂತವಾಗಿ ಕಿತ್ತುಕೊಳ್ಳುವ ಯತ್ನ ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಟರಾಯನಪುರ ಸರ್ಕಾರಿ ಶಾಲೆ ಶಿಥಿಲವಾಗಿದ್ದರಿಂದ ಸಿಎಸ್‌ಆರ್ ನಿಧಿಯಡಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಆದರೆ, ಕೆಲ ದಿನಗಳ ಹಿಂದೆ ಏಕಾಏಕಿ ಶಾಲೆ ಕಾಂಪೌಂಡ್‌ಗೆ ಪದವಿ ಕಾಲೇಜು ಆರಂಭಿಸುವ ಫಲಕ ಹಾಕಲಾಗಿದೆ. ಪ್ರೌಢಶಾಲೆ ಸೌಲಭ್ಯ ಇಲ್ಲದೆ ಡಿಗ್ರಿ ಕಾಲೇಜು ಏಕೆಂಬುದು ಅರ್ಥವಾಗುತ್ತಿಲ್ಲ. ಹೊಸ ಕಟ್ಟಡವನ್ನು ಪ್ರಾಥಮಿಕ ಶಾಲೆಯಾಗಿ ಮುಂದುವರಿಸಲು ಇಲಾಖೆ ಒಪ್ಪಿಗೆ ನೀಡಲಿ.
- ಕೃಷ್ಣಾರೆಡ್ಡಿ , ಎಸ್‌ಡಿಎಂಸಿ ಅಧ್ಯಕ್ಷ, ಬ್ಯಾಟರಾಯನಪುರ ಸರ್ಕಾರಿ ಶಾಲೆ