

ರಾಯಚೂರು: ನಗರದ ಸತ್ಯನಾಥ ಕಾಲನಿಯಲ್ಲಿ ಐದು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಆಸ್ಪತ್ರೆ ಆರಂಭಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಕಟ್ಟಡದಲ್ಲಿ ಬಾರ್ ಆರಂಭಕ್ಕೆ ಅನುಮತಿ ನೀಡಬಾರದು ಎಂದು ಸತ್ಯನಾಥ ಕಾಲನಿ ನಿವಾಸಿಗಳು ಒತ್ತಾಯಿಸಿದರು.
ನಿವಾಸಿಗಳ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಕಟ್ಟಡದ ಪಕ್ಕದಲ್ಲಿ ಆಂಜನೇಯ ದೇವಸ್ಥಾನವಿದ್ದು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದು, ಬಾರ್ ಆರಂಭದಿಂದ ಭಕ್ತರಿಗೆ ತೊಂದರೆಯಾಗಲಿದೆ ಎಂದು ದೂರಿದರು.
ಮಂತ್ರಾಲಯ ರಸ್ತೆಗೆ ಹೊಂದಿಕೊಂಡಂತೆ ಸರ್ವೆ ನಂ.1220ರಲ್ಲಿ ವಿಜಯರಾಜೇಶ್ವರಿ ಗೋಪಿಶೆಟ್ಟಿ ಎಂಬುವವರು ಐದು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ಆಸ್ಪತ್ರೆ ಆರಂಭಿಸಲಾಗುತ್ತಿದೆ. ಅಕ್ಕಪಕ್ಕದಲ್ಲಿ ಮನೆಗಳು, ದೇವಸ್ಥಾನ ಇರುವುದರಿಂದ ನಗರಸಭೆಯಿಂದ ಪರವಾನಗಿ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ನಿವಾಸಿಗಳಾದ ತ್ರಿವಿಕ್ರಮ ಜೋಷಿ, ನಾರಾಯಣರಾವ್, ರವೀಂದ್ರ ಜಲ್ದಾರ್, ಹನುಮಂತರಾವ್, ರಾಮಾರಾವ್ ಗಣೇಕಲ್, ಶ್ರೀಹರಿ, ಕಿಶನರಾವ್, ಶಾಂತಾಬಾಯಿ, ರಮೇಶ ಕಟ್ಟಿ, ಶ್ರೀನಿವಾಸರಾವ್, ಮುಕುಂದಾಚಾರ್, ಮೋಹನ್, ಸಂಜಯ್ ಆಚಾರ್ ಇದ್ದರು.