

ತುಮಕೂರು : ಶ್ರೀ ಸಿದ್ಧಿವಿನಾಯಕ ಮಾರುಕಟ್ಟೆ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಒಪ್ಪಂದ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ಖಾಸಗಿ ಸಹಭಾಗಿತ್ವ ಯೋಜನೆ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಮಲ್ಟಿ ಯುಟಿಲಿಟಿ ಮಾಲ್ ಯೋಜನೆಯನ್ನೇ ಕೈಬಿಡಲು ನಿರ್ಧರಿಸಲಾಗಿದೆ.
ಜೆಡಿಎಸ್-ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು 2019ರ ಫೆ.23ರಂದು ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರಲ್ಲದೆ, ಮಂಗಳೂರು ಮೂಲದ ಮೂವರು ಉದ್ಯಮಿಗಳನ್ನು ಒಳಗೊಂಡ ಕಂಪನಿಗೆ ಟೆಂಡರ್ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದರು. ಈ ಬಗ್ಗೆ ಮಾಜಿ ಸಚಿವ ಸೊಗಡುಶಿವಣ್ಣ ದಾಖಲೆ ಸಮೇತ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು 100 ಕೋಟಿ ರೂ. ಮೌಲ್ಯದ ಹಳೆಯ ಮಾರುಕಟ್ಟೆ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಜೆಡಿಎಸ್-ಸಮ್ಮಿಶ್ರ ಸರ್ಕಾರದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಏಕೈಕ ಬಿಡ್: ಮಾರುಕಟ್ಟೆ ಜಾಗದಲ್ಲಿ ಮಾಲ್ ನಿರ್ಮಾಣ ಸಂಬಂಧ ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ 2 ಬಾರಿ ಟೆಂಡರ್ ಕರೆದರೂ ಯಾರು ಭಾಗವಹಿಸದೇ ಇದ್ದುದರಿಂದ 3ನೇ ಬಾರಿ ಟೆಂಡರ್ ಕರೆದಾಗ ಏಕೈಕ ಬಿಡ್ ಸ್ವೀಕರಿಸಿದ್ದು ಪಿಪಿಪಿ ಮಾದರಿಯಡಿ ಮಂಗಳೂರಿನ ಕನ್ಸೋರ‌್ಟಿಯಂ ಕಂಪನಿಗೆ ಮಲ್ಟಿ ಯುಟಿಲಿಟಿ ಮಾಲ್ ಕಟ್ಟಲು ಈ ಜಾಗವನ್ನು 30 ವರ್ಷ ಲೀಸ್‌ಗೆ ನೀಡಲಾಗಿತ್ತು. ಮಾಜಿ ಸಚಿವ ಯು.ಟಿ.ಖಾದರ್ ಕ್ಷೇತ್ರದ ಕಂಪನಿಗೆ ಈ ಬಿಡ್ ನೀಡಿದ್ದು ಸಾಕಷ್ಟು ಗುಮಾನಿಗಳನ್ನು ಹುಟ್ಟುಹಾಕಿದೆ. ಅಲ್ಲದೆ, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಆಕ್ಷೇಪಣೆಗೆ ವ್ಯಕ್ತಪಡಿಸಿದ್ದನ್ನು ಮನಗಂಡು ನಂತರ ಈ ಪ್ರಸ್ತಾವನೆ ಕೈಬಿಡುವಂತೆ ಮುಖ್ಯಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್‌ಗೆ ಮನವಿ ಮಾಡಲಾಗಿದ್ದು ಅವರಿಂದ ಯೋಜನೆ ಕೈಬಿಡುವ ಭರವಸೆ ಸಿಕ್ಕಿದೆ ಎಂದು ಜ್ಯೋತಿಗಣೇಶ್ ತಿಳಿಸಿದ್ದಾರೆ.
ತ್ರಿಪಕ್ಷೀಯ ಒಪ್ಪಂದ : ಈ ಯೋಜನಾ ಸ್ಥಳವು ವಿವಾದದಲ್ಲಿ ಇದ್ದುದರಿಂದ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಎಪಿಎಂಸಿ, ಪಾಲಿಕೆ ಪರಸ್ಪರ ಸಂಧಾನ ಮೂಲಕ ಸ್ಮಾರ್ಟ್‌ಸಿಟಿ ವತಿಯಿಂದ ಪಿಪಿಪಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಪ್ರಸ್ತಾಪಿತ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಹಾಗೂ ಮಲ್ಟಿ ಯುಟಿಲಿಟಿ ಮಾಲ್ ನಿಂದ ಬರುವ ಆದಾಯದಲ್ಲಿ ಶೇ.50ರ ಅನುಪಾತದಲ್ಲಿ ಆದಾಯ ಹಂಚಿಕೊಳ್ಳುವ ಒಡಂಬಡಿಕೆ ಮಾಡಿಕೊಂಡು ವಿವಾದಿತ ಸ್ಥಳವನ್ನು ಸ್ಮಾರ್ಟ್‌ಸಿಟಿ ಇಲಾಖೆಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಒಡಂಬಂಡಿಕೆ ಮಾಡಿಕೊಳ್ಳಲಾಗಿತ್ತು.
ಜೆಡಿಎಸ್-ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾರುಕಟ್ಟೆ ಜಾಗದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೆಂಡರ್‌ನಲ್ಲಿ ಪಾರದರ್ಶಕತೆ ಕಂಡುಬಂದಿಲ್ಲ. ಈ ಬಗ್ಗೆ ಸಾಕಷ್ಟು ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮೂಲಕ ಯೋಜನೆ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ