ಇಳಕಲ್​ನಲ್ಲಿ ಕಾನೂನು ಮಹಾವಿದ್ಯಾಲಯಕ್ಕೆ ಅನುಮತಿ ಬೇಡ

New PM 1 New
Published on

ಹುಬ್ಬಳ್ಳಿ : ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದವರು ಹೊಸ ಕಾನೂನು ಮಹಾವಿದ್ಯಾಲಯ ಪ್ರಾರಂಭಿಸಲು ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ವಿ. ಸೋಮರಡ್ಡಿ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದವರು ಈಗಾಗಲೇ ಇರುವ ಬಿಸಿಎ ಪದವಿ ಮಹಾವಿದ್ಯಾಲಯದಲ್ಲಿ ಕಾನೂನು ಮಹಾವಿದ್ಯಾಲಯ ಆರಂಭಿಸಲು ಅನುಮತಿ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಒಂದೇ ಸಣ್ಣ ಕಟ್ಟಡದಲ್ಲಿ ಈಗಾಗಲೇ ಎಂಬಿಎ, ಬಿಸಿಎ, ಬಿಬಿಎ ಕಾಲೇಜುಗಳಿದ್ದು, ಅದರಲ್ಲಿಯೇ ಕಾನೂನು ಮಹಾವಿದ್ಯಾಲಯ ನಡೆಸುವುದು ಕಷ್ಟ ಎಂದು ಹೇಳಿದರು.

ಉತ್ತಮ ಕಾನೂನು ಮಹಾವಿದ್ಯಾಲಯ ಪ್ರಾರಂಭಿಸಬೇಕೆಂದರೆ ಅತ್ಯುತ್ತಮ ಕಟ್ಟಡದ ಜತೆಗೆ ಇನ್ನಿತರ ಅಗತ್ಯ ಸೌಕರ್ಯಗಳೂ ಇರಬೇಕು. ಅಂದಾಗ ಮಾತ್ರ ಸಮಾಜಕ್ಕೆ ಒಬ್ಬ ಒಳ್ಳೆಯ ನ್ಯಾಯವಾದಿಯನ್ನು ಕೊಡಲು ಸಾಧ್ಯ ಎಂದರು.

ಇಳಕಲ್​ನಲ್ಲಿ ಕಾನೂನು ಮಹಾವಿದ್ಯಾಲಯ ಪ್ರಾರಂಭಿಸಲು ರಾಜ್ಯ ಕಾನೂನು ವಿವಿ ಈಗಾಗಲೇ ಅನುಮತಿ ನೀಡಿದ್ದರೆ ಅದನ್ನು ತಕ್ಷಣ ರದ್ದುಗೊಳಿಸಬೇಕು. ಇಲ್ಲದಿದ್ದರೆ ಯಾವುದೇ ಮೂಲ ಸೌಲಭ್ಯ ಇರದೆಡೆ ಕಾನೂನು ಮಹಾವಿದ್ಯಾಲಯ ಪ್ರಾರಂಭಿಸಲು ಅನುಮತಿ ನೀಡಿದ್ದಾರೆಂದು ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net