

ಮಂಗಳೂರು: ಕೆಲವೆಡೆಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ಬಗ್ಗೆ ದೂರುಗಳು ಬಂದಿವೆ. ಮುಂದಿನ ಎರಡು ವಾರ ಏನೇ ಆದರೂ ಧಾರ್ಮಿಕ ಕೇಂದ್ರ ತೆಗೆಯುವ ಸಾಧ್ಯತೆ ಇಲ್ಲ ಎಂದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಯಾರೂ ನಿಯಮ ಉಲ್ಲಂಘಿಸಬಾರದು, ಧಾರ್ಮಿಕ ಕೇಂದ್ರಕ್ಕೆ ತೆರಳುವ ವಾಹನಗಳನ್ನು ವಶಪಡಿಸಿ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿ ಓಡಾಡುವ ವಾಹನ ನಿಯಂತ್ರಣಕ್ಕೆ ಪೆರಿಯಶಾಂತಿ ಸೇರಿದಂತೆ ಅಲ್ಲಲ್ಲಿ ಚೆಕ್‌ಪೋಸ್ಟ್ ಹಾಕಲು ಸೂಚಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರಿಗೂ ಧಾರ್ಮಿಕ ಕೇಂದ್ರ ಮುಖ್ಯಸ್ಥರಿಗೂ ತೆರೆಯದಂತೆ ನಿರ್ದೇಶನ ನೀಡಲಾಗಿದೆ ಎಂದರು.
ಸೀಲ್‌ಡೌನ್ ಗ್ರಾಮ ಸ್ಥಿತಿಗತಿ: ಜಿಲ್ಲೆಯಲ್ಲಿ ಸೀಲ್‌ಡೌನ್ ಮಾಡಿರುವ 17 ಗ್ರಾಮಗಳಲ್ಲಿ ಪ್ರಕರಣದ ಸಂಖ್ಯೆ ಕಡಿಮೆಯಾದಂತೆಯೇ ನಿರ್ಬಂಧ ತೆರವು ಮಾಡುತ್ತಾ ಹೋಗುತ್ತೇವೆ ಎಂದು ಡಿಸಿ ತಿಳಿಸಿದರು. ಸದ್ಯ ಬಹುತೇಕ ಗ್ರಾಮಗಳಲ್ಲಿ ಹೊಸ ಪ್ರಕರಣದ ಸಂಖ್ಯೆ ಕಡಿಮೆಯಾಗಿದೆ, ಇನ್ನೂ 10 ದಿನ ಆಗಿಲ್ಲ ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹಾಗೆಯೇ ಇದೆ. 10 ದಿನ ಆದ ಬಳಿಕ ಸಂಖ್ಯೆ ಇಳಿಕೆಯಾಗಲಿದೆ ಎಂದು ಜಿಪಂ ಸಿಇಒ ಡಾ.ಕುಮಾರ್ ತಿಳಿಸಿದರು.
ಲಸಿಕೆ ಮೆಗಾ ಕ್ಯಾಂಪ್: ರಾಜ್ಯ, ಕೇಂದ್ರದಿಂದ ಲಭ್ಯವಾಗುವ ಲಸಿಕೆ ಪ್ರಮಾಣ ಹೆಚ್ಚಾಗಿದೆ. ಜೂ.20ರಿಂದ ದುಪ್ಪಟ್ಟು ಸಂಖ್ಯೆಯಲ್ಲಿ ಲಸಿಕೆ ಸಿಗುವ ನಿರೀಕ್ಷೆ ಇದೆ. ಹಾಗಾಗಿ ಮುಂದೆ ಜಿಲ್ಲಾದ್ಯಂತ ಲಸಿಕೆ ನೀಡುವ ಮೆಗಾ ಶಿಬಿರಗಳನ್ನು ಏರ್ಪಡಿಸಲು ಸಿದ್ಧತೆ ನಡೆದಿದೆ ಎಂದು ಡಿಸಿ ರಾಜೇಂದ್ರ ತಿಳಿಸಿದರು. ಸದ್ಯ ದಿನಕ್ಕೆ 13-14 ಸಾವಿರ ಲಸಿಕೆ ಸಿಗುತ್ತಿದೆ, ಇದು ದುಪ್ಪಟ್ಟಾಗಲಿದೆ. 44 ವರ್ಷದೊಳಗಿನವರಿಗೆ ರಾಜ್ಯ ಸರ್ಕಾರ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಲಸಿಕೆ ಒದಗಿಸುತ್ತಿದೆ. ಲಸಿಕೆ ನೀಡಿಕೆಯನ್ನು ತ್ವರಿತ ರೂಪದ ಅಭಿಯಾನವಾಗಿ ಗ್ರಾಪಂ ಮಟ್ಟದಲ್ಲಿ ನಡೆಸಬೇಕಾಗಿದ್ದು, ಆದ್ಯತೆ ಮೇರೆಗೆ ನೀಡಲು ಸೂಚನೆ ನೀಡಲಾಗಿದೆ ಎಂದರು.