

ಗುಂಡ್ಲುಪೇಟೆ: ಪಟ್ಟಣದ ರಸ್ತೆ ಬದಿಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಆಗುತ್ತಿದ್ದ ಅನನುಕೂಲ ತಪ್ಪಿಸಲು ಪೊಲೀಸ್ ಇಲಾಖೆ ಆಯ್ದ ಸ್ಥಳಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದೆ.
ಪ್ರತಿ ದಿನವೂ ಬೆಳಗ್ಗೆ 10ರಿಂದ ಸಂಜೆಯವರೆಗೆ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿರುವ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಹೋಗುವವರು ಇವುಗಳ ಎದುರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು. ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುತ್ತಿದ್ದುದರಿಂದ ಪಟ್ಟಣದ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗುತ್ತಿತ್ತು. ಅಲ್ಲದೆ ಪಾದಚಾರಿಗಳಿಗೂ ತೊಂದರೆಯಾಗಿತ್ತು.
ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಆಯ್ದ ಸ್ಥಳಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸುವ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸುವ ಸವಾರರಿಗೆ ಮುಂದಿನ ಮೂರು ದಿನಗಳಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. ಆದ್ದರಿಂದ ವಾಹನ ಸವಾರರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸದೆ, ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಜಯಕುಮಾರ್ ಕೋರಿದ್ದಾರೆ.
ಫೋಟೋ: 03-ಮೇ-ಜಿಪಿಟಿ-4
ಗುಂಡ್ಲುಪೇಟೆ ಪಟ್ಟಣದ ರಸ್ತೆ ಬದಿಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಪೊಲೀಸ್ ಇಲಾಖೆ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿದೆ.