ಪಹಣಿ ಪ್ರಿಂಟ್ ಮಾಡಲು ಪೇಪರ್ ಇಲ್ಲ!: ಮಧುಗಿರಿ ತಾಲೂಕು ಕಚೇರಿಗೆ ರೈತರ ಅಲೆದಾಟ

12 mdg 2
Published on

ಮಾರುತಿ ಪ್ರಸನ್ನಕುಮಾರ್ ಮಧುಗಿರಿ
ಪೇಪರ್ ಇಲ್ಲ ಎಂಬ ನೆಪ ಹೇಳಿ ತಾಲೂಕು ಕಚೇರಿಯಲ್ಲಿ ರೈತರಿಗೆ ವಾರದಿಂದ ಪಹಣಿ ವಿತರಿಸಿಲ್ಲ!.
ಪೇಪರ್ ಕೊರತೆಯಿಂದ ಪಹಣಿ, ಎಂ.ಆರ್.ವಿತರಣೆ ಸಾಧ್ಯವಿಲ್ಲ ಎಂದು ಕಚೇರಿ ಸಿಬ್ಬಂದಿ ನೋಟಿಸ್ ಅಂಟಿಸಿ ಕೈತೊಳೆದುಕೊಂಡಿರುವುದು ರೈತರನ್ನು ಚಿಂತೆಗೀಡುಮಾಡಿದೆ.


ರೈತರಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಪಹಣಿ ಅತ್ಯಗತ್ಯ. ಆದರೆ ತಾಲೂಕು ಕಚೇರಿಯಲ್ಲಿ ವಾರದಿಂದ ಪಹಣಿ, ಎಂ.ಆರ್.ಪಡೆಯಲು ಪೇಪರ್ ಕೊರತೆಯಿದ್ದು, ಕಚೇರಿಗೆ ಸರಬರಾಜಾಗಿಲ್ಲ ಎಂಬ ನೆಪವೊಡ್ಡಿ ರೈತರನ್ನು ಕಚೇರಿಗೆ ಅಲೆಸುತ್ತಿದ್ದಾರೆ.


ದೂರದೂರುಗಳಿಂದ ಕೆಲಸ ಕಾರ್ಯಗಳನ್ನು ತೊರೆದು ಪಹಣಿ ಪಡೆಯಲು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವ ರೈತರು ಅಧಿಕಾರಿಗಳಿಗೆ ಶಾಪ ಹಾಕಿಕೊಂಡೇ ಹೋಗುತ್ತಿದ್ದಾರೆ.


ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಸಮಯವಾಗಿದ್ದು, ಕೃಷಿ ಕಾರ್ಯಗಳನ್ನು ಬಿಟ್ಟು ಪಹಣಿಗೆ ಅಲೆದಾಡಬೇಕಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಕಚೇರಿಯಲ್ಲಿ ದೊಡ್ಡದಾಗಿ ಬೋರ್ಡ್ ಗಳನ್ನು ನೇತುಹಾಕುವ ಅಧಿಕಾರಿಗಳು ರೈತರನ್ನು ಹೀಗೆ ಅಲೆದಾಡಿಸುವುದು ಯಾವ ನ್ಯಾಯ ಎಂಬುದು ರೈತರ ಪ್ರಶ್ನೆಯಾಗಿದೆ.


ಪೇಪರ್ ತಂದರೆ ಪಹಣಿ ಕೊಡ್ತಾರೆ!: ತುರ್ತಾಗಿ ಪಹಣಿ ಬೇಕೆಂದರೆ ಪಹಣಿ ಪ್ರಿಂಟ್ ಹಾಕಲು ರೈತರೇ ಪೇಪರ್ ತಂದುಕೊಟ್ಟು, ಪಹಣಿ ಶುಲ್ಕ ಪಾವತಿಸಿದರೆ ಪಹಣಿ ನೀಡುತ್ತಾರೆ ಎಂದು ಆರೋಪಿಸುವ ರೈತರು ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲೇ ಪಹಣಿ ಮುದ್ರಿಸುವ ಪೇಪರ್‌ಗೂ ಕೊರತೆಯಿದೆ ಎಂದರೆ ಹೇಗೆ..? ತುರ್ತಾಗಿ ಪಹಣಿಬೇಕೆಂದರೆ ಪೇಪರ್ ಹಿಡಿದುಕೊಂಡು ಕಚೇರಿಗೆ ಹೋಗಬೇಕಾ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ತಾಲೂಕು ಕಚೇರಿಯಲ್ಲಿ ಪಹಣಿ ಮುದ್ರಿಸುವ ಪೇಪರ್ ದಾಸ್ತಾನು ಇಲ್ಲದೇ ಪಹಣಿ ವಿತರಣೆಯಲ್ಲಿ ತೊಂದರೆಯಾಗಿರುವುದು ನಿಜ. ಜಿಲ್ಲಾದ್ಯಂತ ಈ ಸಮಸ್ಯೆ ಇದ್ದು, ಸಂಬಂಧ ಪಟ್ಟ ಏಜೆನ್ಸಿಯವರು ಪೇಪರ್ ಸರಬರಾಜು ಮಾಡದಿರುವುದರಿಂದ ಸಮಸ್ಯೆಯಾಗಿದೆ.
- ಸುರೇಶಾಚಾರ್, ತಹಸೀಲ್ದಾರ್ ಮಧುಗಿರಿ


ವಾರದಿಂದ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರತಿದಿನ ಪಹಣಿಗಾಗಿ ಮಧುಗಿರಿ ತಾಲೂಕು ಕಚೇರಿಗೆ ಅಲೆಯುವುದಾಗಿದೆ. ಪಹಣಿ ಕೇಳಿದರೆ ಪೇಪರ್ ಇಲ್ಲ ಎಂದು ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂದು ಕೇಳಿದರೂ ಉತ್ತರವಿಲ್ಲ.
- ರಾಮಣ್ಣ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net